(ವಿಜಯನಗರ ಜಿಲ್ಲೆ) : ‘ಕುರುಬ ಸಮುದಾಯವನ್ನು ಎಸ್‌ಟಿ ಮೀಸಲು ಪಟ್ಟಿಗೆ ಸೇರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಡಬಲ್ ಎಂಜಿನ್ ಸರ್ಕಾರ ಎಂದು ಬೀಗುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಬಳಿ ಕುಳಿತು ಕುರುಬರಿಗೆ ಎಸ್‌ಟಿ ಮೀಸಲಾತಿ ಕೊಡಿಸಲಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.
ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದಲ್ಲಿ ಭಾನುವಾರ ಕಾಗಿನೆಲೆ ಕನಕಗುರುಪೀಠದ ಶಾಖಾ ಮಠದಲ್ಲಿ ನೂತನ ಗಂಗಮಾಳಮ್ಮ ಯಾತ್ರಿ ನಿವಾಸ ಉದ್ಘಾಟಿಸಿ ಅವರು ಮಾತನಾಡಿದರು.
‘ಬೀದರ್, ಕಲಬುರಗಿ, ಯಾದಗಿರಿ, ಕೊಡಗು ಜಿಲ್ಲೆಯ ಕುರುಬರನ್ನು ಎಸ್‌ಟಿಗೆ ಸೇರಿಸುವಂತೆ ನಾವು ಈ ಹಿಂದೆಯೇ ಶಿಫಾರಸು ಮಾಡಿದ್ದೇವೆ. ಕೇಂದ್ರ ಸರ್ಕಾರ ಇನ್ನೂ ಪರಿಗಣಿಸಿಲ್ಲ’ ಎಂದರು.
ರಾಜೀನಾಮೆಗೆ ಸಿದ್ಧ:
‘ಕೇಂದ್ರ ಸರ್ಕಾರ ಸಂವಿಧಾನ ಬಾಹಿರವಾಗಿ ಮೇಲ್ವರ್ಗದವರಿಗೆ ಶೇ 10ರಷ್ಟು ಮೀಸಲಾತಿ ನೀಡಿದೆ. ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ನೀಡಬಹುದೆಂದು ಸಂವಿಧಾನದ ಪರಿಚ್ಛೇದ 15, 16ರಲ್ಲಿ ಉಲ್ಲೇಖಿಸಲಾಗಿದೆ. ಮೇಲ್ಜಾತಿಯ ಬಡವರಿಗೂ ಮೀಸಲಾತಿ ಕೊಡಬಹುದು ಎಂದು ಎಲ್ಲೂ ಹೇಳಿಲ್ಲ. ಅದನ್ನು ಸಾಬೀತುಪಡಿಸಿದರೆ ನಾನು ರಾಜೀನಾಮೆ ನೀಡಲು ಸಿದ್ದ’ ಎಂದು ಸವಾಲೆಸೆದರು.
ಮೇಲ್ವರ್ಗಗಳಿಗೆ ಸಂವಿಧಾನ ಬಾಹಿರವಾಗಿ ಮಿಸಲಾತಿ ಘೋಷಿಸಿದರೂ ಯಾರೊಬ್ಬರೂ ಪ್ರಶ್ನೆ ಮಾಡಲಿಲ್ಲ. ನಾನು ರಾಜಕೀಯದಲ್ಲಿದ್ದೇನೆ. ಇದನ್ನೆಲ್ಲ ನಾನು ಹೇಳಬಾರದು. ಆದ್ರೂ ಹೇಳುತ್ತಿರುವೆ. ಹಿಂದುಳಿದ ಸಮುದಾಯಗಳ ಜನರು, ಮಠಾಧೀಶರು ಇಂಥ ಸೂಕ್ಷ್ಮ ವಿಚಾರಗಳನ್ನು ಅರ್ಥ ಮಾಡಿಕೊಂಡು ಧ್ವನಿ ಎತ್ತಬೇಕು ಎಂದು ಹೇಳಿದರು.
ಸ್ವಾಮಿ ವಿವೇಕಾನಂದರು ಹಿಂದೂ ಮತ್ತು ಹಿಂದುತ್ವ ಬೇರೆ ಎಂದು ವ್ಯಾಖ್ಯಾನಿಸಿದ್ದಾರೆ. ವಿವೇಕಾನಂದರನ್ನು ಪೂಜಿಸುವವರು, ಆರಾಧಿಸುವವರು ಅವರ ವಿಚಾರಧಾರೆಗಳನ್ನು ಮುಚ್ಚಿಟ್ಟಿದ್ದಾರೆ ಎಂದು ಟೀಕಿಸಿದರು.
Laxmi News 24×7