Breaking News

ಬೆಳಗಾವಿ: ಜಿ.ಪಂ ಕಚೇರಿ ಮುಂದೆ ಹಿರಿಯರ ಧರಣಿ

Spread the love

ಬೆಳಗಾವಿ: ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡಿ ನಿವೃತ್ತರಾದ ಆಯಾಗಳ ಬೇಸಿಗೆ ರಜೆಯ ಬಾಕಿ ವೇತನ ನೀಡಬೇಕು ಹಾಗೂ ತಡೆಹಿಡಿಯಲಾದ ಆರು ತಿಂಗಳ ವೇತನವನ್ನೂ ಕೊಡಮಾಡಬೇಕು ಎಂದು ಆಗ್ರಹಿಸಿ, ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಹಿರಿಯರು ಜಿಲ್ಲಾ ಪಂಚಾಯಿತಿ ಮುಂದೆ ಶುಕ್ರವಾರ ಇಡೀ ದಿನ ಧರಣಿ ನಡೆಸಿದರು.

 

ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳ ಆಯಾಗಳ ಸಂಘದ ನೇತೃತ್ವದಲ್ಲಿ ಸೇರಿದ ಹಲವು ಮಹಿಳೆಯರು ಧರಣಿ ಕುಳಿತರು. ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೂ ಧಿಕ್ಕಾರ ಕೂಗಿದರು.

ಜಿಲ್ಲೆಯ ಹಲವು ಆಯಾಗಳ 2002ರಿಂದ 2012ರ ವರೆಗಿನ ಬೇಸಿಗೆ ರಜೆ ಬಾಕಿ ವೇತನ ತಡೆಯಲಾಗಿದೆ. ಇದನ್ನು ನೀಡುವಂತೆ ವರ್ಷದುದ್ದಕ್ಕೂ ಹೋರಾಟ ಮಾಡಿಕೊಂಡು ಬರಲಾಗಿದೆ. ಆದರೆ, ಅಧಿಕಾರಿಗಳು ಇಲಾಖೆಯಿಂದ ಇಲಾಖೆಗೆ ಅಲೆದಾಡಿಸುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆಯೇ ನಾವು ಸೇವಾ ನಿವೃತ್ತಿ ಹೊಂದಿದ್ದೇವೆ. ಈಗ ವಯಸ್ಸು ಹೆಚ್ಚಾಗಿದೆ. ನಡೆದಾಡುವ ಶಕ್ತಿ ಇಲ್ಲ. ಇಂಥದರಲ್ಲಿ ನಮ್ಮ ಹಕ್ಕಿನ ಪಾಲು ಕೇಳುವುದಕ್ಕೆ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ ಎಂದೂ ಅವರು ಆಕ್ರೋಶ ಹೊರಹಾಕಿದರು.

ರಾಜ್ಯದ ಬೇರೆಬೇರೆ ಜಿಲ್ಲೆಗಳಲ್ಲಿ ಬೇಸಿಗೆಯ ಬಾಕಿ ವೇತನ ನೀಡಲಾಗಿದೆ. ಆದರೆ, ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಹಲವರ ವೇತನ ಇನ್ನೂ ಬಂದಿಲ್ಲ. ಮುಪ್ಪಿನ ವಯಸ್ಸಿನಲ್ಲಿ ಜೀವನ ಸಾಗಿಸುವುದು ದುಸ್ತರವಾಗಿದೆ. ಮಾನವೀಯತೆ ಹಿನ್ನೆಲೆಯಲ್ಲಾದರೂ ಅಧಿಕಾರಿಗಳು ನೆರವಿಗೆ ಬರಬೇಕಿತ್ತು. ಅದನ್ನು ಬಿಟ್ಟು ಇಲ್ಲಸಲ್ಲದ ನೆಪ ಹೇಳುತ್ತಿದ್ದಾರೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಜಯಶ್ರೀ ಊಟಿ ದೂರಿದರು.

‘ಬೇಸಿಗೆ ರಜೆಯ ಬಾಕಿಯೇ ₹98.54 ಲಕ್ಷ ಉಳಿಸಿಕೊಂಡಿದ್ದಾರೆ. ಕ್ಷೇತ್ರಶಿಕ್ಷಣಾಧಿಕಾರಿ ಬಳಿ ಕೇಳಲು ಹೋದರೆ ಜಿಲ್ಲಾ ಪಂಚಾಯಿತಿಗೆ ಹೋಗಿ ಕೇಳಿ ಎನ್ನುತ್ತಾರೆ. ಜಿಲ್ಲಾ ಪಂಚಾಯಿತಿಯಿಂದ ಅನುದಾನ ಬಿಡುಗಡೆ ಆಗಿದೆ, ಶಿಕ್ಷಣಾಧಿಕಾರಿಗಳನ್ನೇ ಕೇಳಿ ಎಂದು ಅಲ್ಲಿನ ಅಧಿಕಾರಿ ಹೇಳುತ್ತಾರೆ. ಧಾರವಾಡದಲ್ಲಿ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಿದರೂ ನಮಗೆ ನ್ಯಾಯ ಸಿಕ್ಕಿಲ್ಲ’ ಎಂದರು.

 


Spread the love

About Laxminews 24x7

Check Also

ಹುಕ್ಕೇರಿ ನಗರ ಅಭಿವೃದ್ಧಿಗೆ ಶ್ರಮಿಸಲಾಗುವದು – ಸಚಿವ ಸತೀಶ ಜಾರಕಿಹೋಳಿ

Spread the love ಹುಕ್ಕೇರಿ : ಹುಕ್ಕೇರಿ ನಗರ ಅಭಿವೃದ್ಧಿಗೆ ಶ್ರಮಿಸಲಾಗುವದು – ಸಚಿವ ಸತೀಶ ಜಾರಕಿಹೋಳಿ ಹುಕ್ಕೇರಿ ನಗರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ