ಚಿಕ್ಕೋಡಿ: ಮಬ್ಬುಗತ್ತಲು ಆವರಿಸುತ್ತಿದ್ದಂತೆಯೇ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ ಜನ. ಸ್ವತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿ, ವೀರರಾಣಿ ಕಿತ್ತೂರು ಚನ್ನಮ್ಮನ ಹೋರಾಟದ ಮರುಸೃಷ್ಟಿಯ ಮೆಗಾ ನಾಟಕ ಕಣ್ತುಂಬಿಕೊಳ್ಳುವ ಕಾತರ. ನೂರಾರು ಕಲಾವಿದರು, ಆನೆ, ಒಂಟೆ, ಕುದುರೆಗಳನ್ನು ಒಳಗೊಂಡ ಅದ್ಧೂರಿ ರಂಗಸಜ್ಜಿಕೆ.
ಆಕರ್ಷಕ ಧ್ವನಿ ಮತ್ತು ಬೆಳಕಿನ ಸಂಯೋಜನೆಯಲ್ಲಿ ಮೂಡಿ ಬಂದ ನಾಟಕವನ್ನು ವೀಕ್ಷಿಸಿ, ಪುಳಕಿತಗೊಂಡ ಪ್ರೇಕ್ಷಕ ಗಣ…
ಪಟ್ಟಣದ ಆರ್.ಡಿ. ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಹಾಗೂ ಸೋಮವಾರ ‘ವೀರರಾಣಿ ಕಿತ್ತೂರು ಚನ್ನಮ್ಮ’ ನಾಟಕ ಪ್ರದರ್ಶನದಲ್ಲಿ ಕಂಡುಬಂದ ಕ್ಷಣಗಳಿವು. ಯಕ್ಸಂಬಾದ ಜೊಲ್ಲೆ ಗ್ರೂಫ್ ನೇತೃತ್ವದಲ್ಲಿ ಧಾರವಾಡದ ರಂಗಾಯಣ ತಂಡದ ಕಲಾವಿದರು ಪ್ರಸ್ತುತಪಡಿಸಿದ ನಾಟಕವನ್ನು ಗ್ರಾಮೀಣರು ಕಣ್ಣು ಪಿಟಕಿಸದೇ ನೋಡಿದರು.
ಧಾರವಾಡ ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ ಅವರ ನಿರ್ದೇಶನದಲ್ಲಿ ಮೂರೂವರೆ ಗಂಟೆಗೂ ಹೆಚ್ಚು ಕಾಲ ಪ್ರದರ್ಶನಗೊಂಡ ನಾಟಕದುದ್ದಕ್ಕೂ ಕಿತ್ತೂರು ಸಂಸ್ಥಾನದ ಸಂರಕ್ಷಣೆಗಾಗಿ ಬ್ರಿಟಿಷರು ಮತ್ತು ಪೇಶ್ವೆಗಳ ವಿರುದ್ದ ಹೋರಾಟ ನಡೆಸಿದ ಮಲ್ಲಸರ್ಜ ದೇಸಾಯಿ, ರಾಣಿ ಚನ್ನಮ್ಮ ಮತ್ತವರ ಸಹಚರ ಬಂಟರ ಸಾಹಸವನ್ನು ಕಣ್ಣಿಗೆ ಕಟ್ಟುವಂತೆ ಅಭಿನಯಿಸಿದರು.
ರಾಣಿ ಚನ್ನಮ್ಮನ ಜನನ, ಬಾಲ್ಯ, ತಾರುಣ್ಯ, ವಿದ್ಯೆ ಜೊತೆಗೆ ವ್ಯಕ್ತಿತ್ವದ ಚಿತ್ರಣ, ರಾಜನೀತಿ, ಆದರ್ಶ ತತ್ವಗಳನ್ನು ನಾಟಕದಲ್ಲಿ ಪರಿಣಾಮಕಾರಿಯಾಗಿ ಪ್ರದರ್ಶಿಸಲಾಯಿತು. ಮರಾಠಿಯ ‘ಜಾನತಾ ರಾಜಾ’ ಮೆಗಾ ನಾಟಕದ ಮಾದರಿಯಲ್ಲಿ ಈ ನಾಟಕದಲ್ಲಿಯೂ ಆನೆ, ಕುದುರೆ ಮತ್ತು ಒಂಟೆಗಳ ಬಳಕೆ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು. ರಾತ್ರಿ 11 ಗಂಟೆವರೆಗೆ ಜನ ಕದಲದೇ ನಾಟಕ ವೀಕ್ಷಿಸಿದರು. ಸೋಮವಾರ ಸಂಜೆ ನಡೆದ ನಾಟಕ ಪ್ರದರ್ಶನವನ್ನೂ ವೀಕ್ಷಿಸಲು ಅಪಾರ ಜನ ಆಗಮಿಸಿದ್ದರು.