ಬೆಳಗಾವಿ: ನನ್ನ ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮರ್, ಉದ್ಯಮಿ ಪರಶಿವಮೂರ್ತಿ, ನರೇಶ, ಶ್ರವಣ, ಡಿ.ಕೆ. ಶಿವಕುಮಾರ್ ವಾಹನ ಚಾಲಕ ಹಾಗೂ ಮಂಡ್ಯ ಮೂಲದ ಇಬ್ಬರು ಪ್ರಮುಖ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ರಾಜಕಾರಣ ಮಾಡಲು ಯೋಗ್ಯನಲ್ಲ. ಷಡ್ಯಂತ್ರದ ಮೂಲಕ ರಾಜಕಾರಣ ಹಾಳು ಮಾಡುವ ಮತ್ತು ನನ್ನ ರಾಜಕೀಯ ಜೀವನ ಮುಗಿಸಲು ಪ್ರಯತ್ನಿಸಿರುವ ಡಿ.ಕೆ.ಶಿವಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸಿ, ಬಂಧಿಸದ ಬಳಿಕವೇ ರಾಜಕೀಯ ದಿಂದ ನಿವೃತ್ತಿ ಆಗುತ್ತಾನೆ ಎಂದು ಘೋಷಿಸಿದರು.
ಸಿಡಿ ಪ್ರಕರಣದಲ್ಲಿ ನನ್ನ ಬಳಿ ಸಾಕಷ್ಟು ಸಾಕ್ಷಿಗಳಿವೆ. ಡಿ.ಕೆ.ಶಿವಕುಮಾರ್ ಅವರೇ ಸಿಡಿ ಪ್ರಕರಣದ ಸೂತ್ರದಾರ. ಈ ಕುರಿತು ಕೂಡಲೇ ಆಡಿಯೋ ಬಿಡುಗಡೆ ಮಾಡಿತ್ತೇನೆ. ಈ ವಿಷಯದಲ್ಲಿ ನಾನು ಯಾರಿಗೂ ಹೆದರುವ ವ್ಯಕ್ತಿ ನಾನಲ್ಲ. ಇದನ್ನು ಸಿಬಿಐ ತನಿಖೆ ನಡೆಸಲು ರಾಜ್ಯ ಸರ್ಕಾರದ ಮೂಲಕ ಶಿಫಾರಸ್ಸು ಮಾಡುತ್ತೇನೆ. ಇದು ವೈಯಕ್ತಿಕ ವಿಷಯವಾಗಿರುವುದರಿಂದ ಪಕ್ಷದ ನಾಯಕರು, ಮುಖಂಡರಿಗೂ ಇದಕ್ಕೂ ಸಂಬಂಧ ಇಲ್ಲ ಎಂದರು.
10 ಸಾವಿರ ಕೋಟಿ ರೂ.ಹಗರಣ ಕಾರಣ
ನಾನು ನೀರಾವರಿ ಸಚಿವ ಸ್ಥಾನ ವಹಿಸಿಕೊಂಡ ಬಳಿಕ ಅಕ್ರಮ ಟೆಂಡರ್ಗಳಿಗೆ ಅಂಕಿತ ಹಾಕಲು ಡಿ.ಕೆ.ಶಿವಕುಮಾರ್ ಗ್ಯಾಂಗ್ ಒತ್ತಡ ಹಾಕಿತ್ತು. ಆದರೆ, ನಾನು ಅಂತಹ ಕೆಲಸಕ್ಕೆ ಕೈ ಹಾಕಲಿಲ್ಲ. ಅಲ್ಲದೆ, ಬೆಂಗಳೂರು ಶಾಂತಿನಗರದ ಹತ್ತು ಸಾವಿರ ಕೋಟಿ ರೂ. ಫೈಲ್ಗೆ ಒಪ್ಪಿಗೆ ನೀಡದಿರುವುದಕ್ಕೆ ಇಬ್ಬರ ನಡುವೆ ವೈಮಸ್ಸು ಆರಂಭವಾಯಿತು. ಬಳಿಕ ನಾನು ಬಿಜೆಪಿ ಸೇರಿದ ಕಾರಣವೇ ನನ್ನ ಸಿಡಿ ಹೊರ ಬರಲು ಪ್ರಮುಖ ಕಾರಣವಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹಾಳಾಗಲು ವಿಷ ಕನ್ಯೆ ಕಾರಣ
ರಾಜ್ಯದಲ್ಲಿ ಕಾಂಗ್ರೆಸ್ ಹಾಳಾಗಲು ವಿಷಕನ್ಯೆ ಹಾಗೂ ಡಿ.ಕೆ.ಶಿವಕುಮಾರ್ ಕಾರಣ. ಈ ವಿಷ್ಯಕನ್ಯೆ ಸಾಕಷ್ಟು ಜನರ ರಾಜಕೀಯ ಜೀವನ ಹಾಳು ಮಾಡಿದ್ದಾರೆ. ಅಲ್ಲದೆ, ಕಾಂಗ್ರೆಸ್ ಕೂಡ ಹಾಳಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.