ಬೆಳಗಾವಿ: ಮಧ್ಯಪ್ರದೇಶದ ಗ್ವಾಲಿಯರ್ ಸಮೀಪ ಸುಖೋಯ್ 30 ಎಂಕೆಐ ಹಾಗೂ ಮಿರಾಜ್-2000 ಯುದ್ಧ ವಿಮಾನಗಳ ಮಧ್ಯೆ ಶನಿವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಪೈಲೆಟ್, ವಿಂಗ್ ಕಮಾಂಡರ್ ಹನುಮಂತರಾವ್ ರೇವಣಸಿದ್ಧಪ್ಪ ಸಾರಥಿ (34) ಬೆಳಗಾವಿ ಮೂಲದವರು.
ಇಲ್ಲಿನ ಗಣೇಶಪುರದ ಮನೆಯಲ್ಲಿ 1987ರಲ್ಲಿ ಜನಿಸಿದ ಅವರು, ಬಾಲ್ಯವನ್ನು ಇಲ್ಲಿಯೇ ಕಳೆದಿದ್ದರು. ನಗರದ ಕೇಂದ್ರೀಯ ವಿದ್ಯಾಲಯ-2ರಲ್ಲಿ ಶಿಕ್ಷಣ ಪೂರೈಸಿದ್ದರು. ಪೈಲೆಟ್ ಆದ ಮೇಲೆ ಪತ್ನಿ, ಮಕ್ಕಳ ಸಮೇತ ಗ್ವಾಲಿಯರ್‌ನಲ್ಲಿ ನೆಲೆಸಿದ್ದರು.
2009ರಿಂದ ಭಾರತೀಯ ವಾಯುಪಡೆಯಲ್ಲಿ ಹನುಮಂತರಾವ್ ಸೇವೆ ಸಲ್ಲಿಸುತ್ತಿದ್ದರು. ಅವರ ತಂದೆ ರೇವಣಸಿದ್ಧಪ್ಪ ಕೂಡ ಸೇನೆಯಲ್ಲಿ ಕ್ಯಾಪ್ಟನ್ ಆಗಿ ನಿವೃತ್ತಿ ಹೊಂದಿದ್ದಾರೆ. ಸಹೋದರ ಪ್ರವೀಣ ಭಾರತೀಯ ವಾಯುಪಡೆಯಲ್ಲಿಯೇ ಗ್ರೂಪ್ ಕ್ಯಾಪ್ಟನ್ ಆಗಿದ್ದಾರೆ.
‘ನಿತ್ಯದ ತರಬೇತಿ ಹಾರಾಟಕ್ಕೆ ಎರಡು ವಿಮಾನಗಳು ಹೋದಾಗ ಈ ಅವಘಡ ಸಂಭವಿಸಿದೆ. ವಿಶೇಷ ವಿಮಾನದಲ್ಲಿ ಅವರ ಪಾರ್ಥಿವ ಶರೀರ ಭಾನುವಾರ ಗಣೇಶಪುರಕ್ಕೆ ತರುವುದಾಗಿ ಮಾಹಿತಿ ಬಂದಿದೆ’ ಎಂದು ಕುಟುಂಬದ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.
ಹನುಮಂತರಾವ್ ಅವರಿಗೆ ತಂದೆ- ತಾಯಿ, ಪತ್ನಿ ಮೀಮಾಂಶ, ಮೂರು ವರ್ಷದ ಪುತ್ರಿ, ಒಂದು ವರ್ಷದ ಪುತ್ರ ಇದ್ದಾರೆ. ತಂದೆ ರೇವಣಸಿದ್ಧಪ್ಪ ಹಾಗೂ ತಾಯಿ ಸಾವಿತ್ರಿ ಬೆಳಗಾವಿ ನಗರದಲ್ಲೇ ವಾಸವಿದ್ದಾರೆ
Laxmi News 24×7