ಹೊಸಪೇಟೆ (ವಿಜಯನಗರ): ‘ಚಿತ್ರದುರ್ಗದ ಬಿಜೆಪಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅವರು ಲಂಚ ಪಡೆದಿದ್ದಾರೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್. ಮಂಜುನಾಥ್ ಆಡಿಯೊ ರೆಕಾರ್ಡ್ ಬಿಡುಗಡೆ ಮಾಡಿ ಆರೋಪಿಸಿದ್ದಾರೆ.
ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಾಕ್ಯುಮೆಂಟ್ ಕೊಡಿ ತನಿಖೆ ಮಾಡಿಸುತ್ತೇನೆ ಎಂದು ಹೇಳಿದ್ದಾರೆ. ಅದಕ್ಕಿಂತ ಬೇರೆ ಎವಿಡೆನ್ಸ್ ಬೇಕಾ? ಇವರು ಎವಿಡೆನ್ಸ್ ಆಯಕ್ಟ್ ಓದಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಕೆಪಿಸಿಸಿಯಿಂದ ಮಂಗಳವಾರ ನಗರದ ಡಾ. ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಪ್ರಜಾ ಧ್ವನಿ’ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಮ್ಮ ಅಪ್ಪ ಎಸ್.ಆರ್. ಬೊಮ್ಮಾಯಿ ಅವರು ವಕೀಲರಾಗಿದ್ದರು. ನೀವು ವಕೀಲ ಅಲ್ಲ, ಬಿಇ ಗ್ರ್ಯಾಜುಯೇಟ್. ನಿನಗೆ ಎವಿಡೆನ್ಸ್ ಏನು ಅಂತ ಗೊತ್ತಾಗಲ್ಲ. ಏಕೆಂದರೆ ಎವಿಡೆನ್ಸ್ ಆಯಕ್ಟ್ ಓದಿಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಟೀಕಿಸಿದರು.
ವಿಧಾನಸಭೆಯ ಗೋಡೆಗಳು ಲಂಚ, ಲಂಚ ಎಂದು ಪಿಸುಗುಡುತ್ತಿವೆ. 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಈ ಹಿಂದೆ ಯಾರು ಕೇಳಿರಲಿಲ್ಲ. ಮೊದಲ ಬಾರಿಗೆ ಬಸವರಾಜ ಬೊಮ್ಮಾಯಿ ಅವರಿಗೆ 40 ಪರ್ಸೆಂಟ್ ಕಳಂಕ ಅಂಟಿಕೊಂಡಿದೆ. ಗುತ್ತಿಗೆದಾರರಾದ ಸಂತೋಷ ಪಾಟೀಲ, ಪ್ರಸಾದ್ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಕುಮಾರ ಎಂಬುವರು ದಯಾಮರಣಕ್ಕೆ ಪತ್ರ ಬರೆದಿದ್ದರು. ಈಗ ಚಿತ್ರದುರ್ಗದ ಶಾಸಕರ ಮೇಲೆ ₹90 ಲಕ್ಷ ಲಂಚ ಪಡೆದಿರುವ ಆರೋಪ ಬಂದಿದೆ. ಇಂತಹ ಸರ್ಕಾರ ಅಧಿಕಾರದಲ್ಲಿ ಇರಬೇಕಾ? ಎಂದು ಪ್ರಶ್ನಿಸಿದರು.
Laxmi News 24×7