Breaking News

ಗಡ್ಕರಿಗೆ ಬೆದರಿಕೆ: ಜೈಲಿನೊಳಗೆ ಮೊಬೈಲ್‌ ಹೋಗಿದ್ದು ಹೇಗೆ? ಇನ್ನೂ ಸಿಗದ ಸುಳಿವು

Spread the love

ಬೆಳಗಾವಿ: ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ನಾಗ್ಪುರದ ಕಚೇರಿಗೆ ಬೆದರಿಕೆ ಕರೆ ಮಾಡಿದ್ದ ಕೈದಿ ಜಯೇಶ್‌ ಪೂಜಾರಿ ಕೈಗೆ ಮೊಬೈಲ್‌ ಫೋನ್ ಕೊಟ್ಟಿದ್ದು ಯಾರು? ಜೈಲಿನೊಳಗೆ ಮೊಬೈಲ್‌ ಫೋನ್ ಹೋಗಿದ್ದು ಹೇಗೆ? ಎಂಬ ಬಗ್ಗೆ ಅಧಿಕಾರಿಗಳಿಗೆ ಇನ್ನೂ ಸುಳಿವು ಸಿಕ್ಕಿಲ್ಲ.

 

ಹಿಂಡಲಗಾ ಜೈಲಿನಲ್ಲಿ ಇದ್ದುಕೊಂಡೇ ಶನಿವಾರ ಕರೆ ಮಾಡಿದ್ದ ಕೈದಿ, ತಾನು ಭೂಗತಪಾತಕಿ ದಾವೂದ್‌ ಇಬ್ರಾಹಿಂ ತಂಡದ ಸದಸ್ಯ, ₹100 ಕೋಟಿ ನೀಡುವಂತೆ ಬೆದರಿಕೆ ಒಡ್ಡಿದ್ದ. ಈ ಬಗ್ಗೆ ಮಹಾರಾಷ್ಟ್ರದ ಪೊಲೀಸರು ಪರಿಶೀಲಿಸಿದಾಗ ಅವನ ‘ನಟೋರಿಯಸ್‌’ ಚರಿತ್ರೆ ಹೊರಬಿದ್ದಿದೆ.

‘ಜೈಲಿನೊಳಗೆ ಹಿರಿಯ ಅಧಿಕಾರಿಗಳನ್ನು ಬಿಟ್ಟರೆ ಅನ್ಯರಿಗೆ ಮೊಬೈಲ್‌ ಅಥವಾ ಎಲೆಕ್ಟ್ರಾನಿಕ್‌ ಪರಿಕರ ಒಯ್ಯಲು ಅವಕಾಶವಿಲ್ಲ. ಹೀಗಾಗಿ, ಜಯೇಶ್‌ಗೆ ಮೊಬೈಲ್‌ ಸಿಕ್ಕಿದ್ದು ಹೇಗೆ? ಕರೆಗೆ ಬಳಸಿದ್ದ ಸಿಮ್‌ ಯಾರ ಹೆಸರಲ್ಲಿದೆ ಎಂದು ತನಿಖೆ ನಡೆದಿದೆ’ ಎಂದು ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್‌ ತಿಳಿಸಿದರು.

‘ಪ್ರಜಾವಾಣಿ’ಗೆ ಜೊತೆಗೆ ಮಾತನಾಡಿದ ಅವರು, ‘ಕಾರಾಗೃಹದ ಗೋಡೆಗಳು ಕಿರಿದಾಗಿವೆ. ಹೊರಗಡೆ ನಿಂತು ಮೊಬೈಲ್‌ ಎಸೆದಿರುವ ಸಾಧ್ಯತೆ ಅಲ್ಲಗಳೆಯಲಾಗದು. ಸಿಬ್ಬಂದಿಯೇ ಒಯ್ದು ಕೊಟ್ಟಿರುವ ಆರೋಪವು ಇದೆ. ಒಟ್ಟು 68 ಸಿಸಿಟಿವಿ ಕ್ಯಾಮೆರಾಗಳಿದ್ದು ಪರಿಶೀಲನೆ ಮಾಡಲಾಗುವುದು’ ಎಂದೂ ಹೇಳಿದರು.

‘ಇಲ್ಲಿ 900ಕ್ಕೂ ಹೆಚ್ಚು ಕೈದಿಗಳಿದ್ದಾರೆ. 120 ಸಿಬ್ಬಂದಿ ಇದ್ದೇವೆ. 50 ಸಿಬ್ಬಂದಿ ಕೊರತೆ ಇದೆ. ಬೇರೆ ಬೇರೆ ಕಡೆಯ ಅಪರಾಧಿಗಳನ್ನು ತಂದು ಇಲ್ಲಿಗೇ ಸೇರಿಸುತ್ತಾರೆ. ಅಪಾಯಕಾರಿ ಅಪರಾಧಿಗಳ ಮೇಲೆ ಪ್ರತ್ಯೇಕವಾಗಿ ಕಣ್ಣಿಡಬೇಕಾಗುತ್ತದೆ. ಸುರಕ್ಷತೆ ದೃಷ್ಟಿಯಿಂದ ಯಾವುದೇ ಲೋ‍ಪ ಆಗಿಲ್ಲ’ ಎಂದರು.

ಜೈಲಿನೊಳಗೂ ಜೋರು: ‘ಕೈದಿ ಜಯೇಶ್‌ ಜೈಲಿನಲ್ಲೂ ಹಲವರಿಗೆ ಬೆದರಿಕೆ ಹಾಕಿದ್ದ. ಆತನ ವರ್ತನೆಯೇ ಕ್ರೌರ್ಯದಿಂದ ಕೂಡಿದೆ’ ಎಂದು ಜೈಲಿನ ಮೂಲಗಳು ತಿಳಿಸಿವೆ.

ಕೊಲೆ, ದರೋಡೆ ಸೇರಿ ಮೂರು ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿರುವ ಜಯೇಶ್‌ 16 ತಿಂಗಳ ಹಿಂದೆ ಹಿಂಡಲಗಾ ಜೈಲು ಸೇರಿದ್ದಾನೆ. ಜತೆಗಿದ್ದ ಇತರೆ ಕೈದಿಗಳ ಮೇಲೆ ದಬ್ಬಾಳಿಕೆ, ಅನುಚಿತ ವರ್ತನೆ ತೋರುವುದನ್ನು ಮುಂದುವರಿಸಿದ್ದ, ಆತನನ್ನು ಪ್ರತ್ಯೇಕ ಸೆಲ್‌ನಲ್ಲಿ ಇಡಲಾಗಿತ್ತು. ಜೈಲಿನ ಅಧಿಕಾರಿಗಳಿಗೂ ಆತ ‘ಧಮ್ಕಿ’ ಹಾಕಿದ್ದ ಎಂದು ಮೂಲಗಳು ಹೇಳಿವೆ.

ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆಯ ಕಡಬಾ ತಾಲ್ಲೂಕು ಶಿರಾಡಿ ನಿವಾಸಿಯಾದ ಈತ, 2008ರಲ್ಲಿ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಕೊಲೆ ಮಾಡಿದ್ದ. ಮಂಗಳೂರು ಐದನೇ ಸೆಷನ್ಸ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. 2019ರಲ್ಲಿ ಆತ ಮೈಸೂರು ಜೈಲಿಗೆ ಸ್ಥಳಾಂತರಗೊಂಡಿದ್ದ. 2021ರ ಸೆ. 14ರಂದು ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿದೆ.

ಸದ್ಯ ಮಹಾರಾಷ್ಟ್ರದ ಧನತೋಲಿ ಪೊಲೀಸ್ ಠಾಣೆಯಲ್ಲಿ ಜಯೇಶ್‌ ವಿರುದ್ಧ ಐಪಿಸಿ ಸೆಕ್ಷನ್ 1860ರ ಕಲಂ 385, 387, 506/2, 507 ಅಡಿ ಪ್ರಕರಣ ದಾಖಲಿಸಲಾಗಿದೆ.

ಜೈಲಿನೊಳಗೆ ಮೊಬೈಲ್‌: ಇದೇ ಮೊದಲಲ್ಲ
2019ರ ಫೆ.19ರಂದು ಇಬ್ಬರು ಡಿಸಿಪಿಗಳು, ಎಸಿಪಿಗಳು, ತಲಾ ಎಂಟು ಮಂದಿ ಇನ್‌ಸ್ಪೆಕ್ಟರ್ ಹಾಗೂ ಪಿಎಸ್‌ಐಗಳು ಮತ್ತು 55 ಸಿಬ್ಬಂದಿಯ ತಂಡ ವಿಶೇಷ ಪರಿಶೀಲನೆ ನಡೆಸಿತ್ತು. ಆಗ ವೇಳೆ ಮೊಬೈಲ್‌ ಫೋನ್‌ ದೊರೆತ ಬಗ್ಗೆ ಡಿಸಿಪಿ ಆಗಿದ್ದ ವಿಕ್ರಂ ಅಮಟೆ ಖಚಿತಪಡಿಸಿದ್ದರು.‌

2021ರಲ್ಲಿಯೂ ಆರೋಪಿಯೊಬ್ಬ ಜೈಲಿನೊಳಗಿಂದಲೇ ಸೆಲ್ಫಿ ಕ್ಲಿಕ್ಕಿಸಿ ಫೇಸ್‌ಬುಕ್‌ಗೆ ಹಾಕಿಕೊಂಡಿದ್ದ. ಆದರೆ, ಅದು ಹಿಂಡಲಗಾ ಜೈಲಲ್ಲ ಎಂದು ಅಧಿಕಾರಿ ಪ್ರತಿಕ್ರಿಯಿಸಿದ್ದರು.

*


Spread the love

About Laxminews 24x7

Check Also

ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ

Spread the love ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳಗಾವಿಯಲ್ಲಿ ಒಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ