Breaking News

ಕಾಂಗ್ರೆಸ್‌ನ 36 ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಬಿಸಿ-

Spread the love

ಬೆಂಗಳೂರು, ಜನವರಿ 14: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ. ರಾಜ್ಯದ ಮೂರು ಪ್ರಬಲ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ತಯಾರು ಮಾಡುವುದರಲ್ಲಿ ನಿರತವಾಗಿವೆ. ಎಚ್‌ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಪಕ್ಷವು ಈಗಾಗಲೇ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಬಿಜೆಪಿಯು ಫೆಬ್ರುವರಿಯಲ್ಲಿ ತನ್ನ ಮೊದಲ ಪಟ್ಟಿಯನ್ನು ಸಿದ್ದಪಡಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಾಂಗ್ರೆಸ್‌ ಪಕ್ಷವು ಜನವರಿ ಕೊನೆಯ ವಾರದಲ್ಲಿ ಮೊದಲ ಪಟ್ಟಿಯನ್ನು ಸಿದ್ದಪಡಿಸಲಿದೆ. ಇದನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಹೇಳಿದ್ದಾರೆ. ಕಾಂಗ್ರೆಸ್‌ನ 36 ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಬಿಸಿ ಎದುರಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಒಂದೇ ಕ್ಷೇತ್ರದಲ್ಲಿ ಹಲವಾರು ಅರ್ಜಿತನ್ನದೇ ಆದ ಹಾಲಿ ಶಾಸಕರನ್ನು ಹೊಂದಿರುವ 36 ಕ್ಷೇತ್ರಗಳಲ್ಲಿ ಹಲವಾರು ಅರ್ಜಿಗಳನ್ನು ಕರ್ನಾಟಕ ಕಾಂಗ್ರೆಸ್ ಸ್ವೀಕರಿಸಿದೆ. ಆ ಮೂಲಕ ಒಂದೇ ಕ್ಷೇತ್ರದಲ್ಲಿ ಹಲವರು ಆಕಾಂಕ್ಷಿಗಳು ಟಿಕೆಟ್‌ಗಾಗಿ ಹರಸಾಹಸ ನಡೆಸುತ್ತಿದ್ದಾರೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿರುವ ಪಕ್ಷಕ್ಕೆ ಅಭ್ಯರ್ಥಿಗಳ ಆಯ್ಕೆಯೇ ಕಷ್ಟಕರ ಕೆಲಸವಾಗಿದೆ.

ಕಾಂಗ್ರೆಸ್ ಪ್ರಸ್ತುತ 70 ಕ್ಷೇತ್ರಗಳನ್ನು ಹೊಂದಿದೆ. ಅದರಲ್ಲಿ 34 ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಂದ ಒಂದೇ ಅರ್ಜಿ ಬಂದಿದೆ. ಅಲ್ಲಿ ಅವರಿಗೆ ಯಾವುದೇ ಪೈಪೋಟಿ ಇಲ್ಲ. ಆದರೆ, ಉಳಿದ 36 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕರು ಟಿಕೆಟ್‌ಗಾಗಿ ಪರದಾಡುವಂತಾಗಿದೆ. ಕಾರಣ, ಅಲ್ಲಿನ ಸ್ಥಳೀಯ ಪ್ರಭಾವಿ ಮುಖಂಡರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಮುಖಂಡರಿಂದ ಹಾಲಿ ಶಾಸಕರು ಪೈಪೋಟಿ ಎದುರಿಸುವಂತಾಗಿದೆ. ಇದು ಹಾಲಿ ಶಾಸಕರನ್ನು ಇಕ್ಕಟ್ಟಿಗೆ ಸಿಲುಕಿಸಿರುವುದಂತೂ ಹೌದು.

 36 ಕ್ಷೇತ್ರಗಳಲ್ಲಿ ಎಷ್ಟು ಅರ್ಜಿ?

ಈ 36 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ತಲಾ ಎರಡು ಅರ್ಜಿಗಳು ಕೆಪಿಸಿಸಿ ಕಚೇರಿಗೆ ಬಂದಿವೆ. ಹಾಲಿ ಶಾಸಕರು ಹಾಗೂ ಒಬ್ಬ ಸ್ಥಳೀಯ ಮುಖಂಡರು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. 23 ಕ್ಷೇತ್ರಗಳಲ್ಲಿ ಮೂರರಿಂದ 16 ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಇದು ಹಾಲಿ ಶಾಸಕರಿಗೆ ಭಾರೀ ಇಕ್ಕಟ್ಟನ್ನು ತಂದೊಡ್ಡಿದೆ. ಯಾವ ಮಾನದಂಡಗಳನ್ನು ಇಟ್ಟುಕೊಂಡು ಯಾರಿಗೆ ಟಿಕೆಟ್‌ ದೊರೆಯಲಿದೆ ಎಂಬುದು ಇನ್ನೆರಡು ವಾರಗಳಲ್ಲಿ ಗೊತ್ತಾಗಲಿದೆ. ಅಲ್ಲಿಯವರೆಗೆ ಕಾದುನೋಡುವುದು ಆಕಾಂಕ್ಷಿಗಳಿಗೆ ಅನಿವಾರ್ಯವಾಗಿದೆ.

 ಸೂಕ್ತ ಅಭ್ಯರ್ಥಿ ಆಯ್ಕೆಯೇ ಗೆಲುವಿಗೆ ನಿರ್ಣಾಯಕ

ಕರ್ನಾಟಕ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ್ದರು. ಪಕ್ಷವು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 2 ಲಕ್ಷ ರೂಪಾಯಿ ಮತ್ತು ಎಸ್‌ಸಿ/ಎಸ್‌ಟಿಗಳಿಗೆ ಒಂದು ಲಕ್ಷ ರೂಪಾಯಿಗಳನ್ನು ಚೆಕ್‌ ಅನ್ನು ಕೆಪಿಸಿಸಿ ಪಡೆದಿದೆ. ಇದನ್ನು ಹೊರತುಪಡಿಸಿ ಅರ್ಜಿ ಶುಲ್ಕವಾಗಿ 5,000 ರೂಪಾಯಿಗಳನ್ನು ಅಭ್ಯರ್ಥಿಗಳು ನೀಡಿದ್ದಾರೆ. ಕಳೆದ ತಿಂಗಳು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ, ಪಕ್ಷ ಪ್ರತಿನಿಧಿಸುವ ಕ್ಷೇತ್ರಗಳಲ್ಲಿಯೂ ಅರ್ಜಿ ಆಹ್ವಾನಿಸುವ ನಿರ್ಧಾರದ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಸೂಕ್ತ ಅಭ್ಯರ್ಥಿ ಆಯ್ಕೆಯೇ ಗೆಲುವಿಗೆ ನಿರ್ಣಾಯಕ ಎಂದು ಡಿಕೆಶಿ ಪ್ರತಿಪಾದಿಸಿದ್ದಾರೆ.

 ಕುಂದಗೋಳ ಟಿಕೆಟ್‌ಗಾಗಿ 16 ಅರ್ಜಿ

ಕುಂದಗೋಳ ಟಿಕೆಟ್‌ಗಾಗಿ 16 ಟಿಕೆಟ್ ಅರ್ಜಿಗಳು ಬಂದಿದ್ದು, ಇದು ರಾಜ್ಯದಲ್ಲಿಯೇ ಅತಿ ಹೆಚ್ಚು ಆಕಾಂಕ್ಷಿಗಳನ್ನು ಹೊಂದಿರುವ ಕ್ಷೇತ್ರ. ಇದರಲ್ಲಿ ಕೆಪಿಸಿಸಿ ಪದಾಧಿಕಾರಿ ಕುಸುಮಾ ಶಿವಳ್ಳಿ ಪ್ರಮುಖರಾದ್ದಾರೆ. ಲಿಂಗಸುಗೂರು ಮತ್ತು ಹರಿಹರ ತಲಾ ಒಂಬತ್ತು ಅರ್ಜಿಗಳು ಬಂದಿವೆ. ಪಾವಗಡ ಎಂಟು, ಅಫಜಲಪುರ, ಬೀದರ್, ಹಗರಿಬೊಮ್ಮನಹಳ್ಳಿ ಮತ್ತು ಶಿಡ್ಲಘಟ್ಟದಲ್ಲಿ ತಲಾ ಏಳು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

 ಆಂತರಿಕ ಬಂಡಾಯದ ಆತಂಕ

ಪುಲಕೇಶಿನಗರದಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಬಿ ಪ್ರಸನ್ನಕುಮಾರ್, ಟಿ ಎಸ್ ರಾಮ ನಾಯ್ಕ್ ಮತ್ತು ಕೆ ಸಿ ಕೇಶವ ಮೂರ್ತಿ ಅವರ ಪೈಪೋಟಿಯನ್ನು ಎದುರಿಸುತ್ತಿದ್ದಾರೆ. ಅದೇ ರೀತಿ ಹೆಬ್ಬಾಳ ಶಾಸಕ ಬಿ ಎಸ್ ಸುರೇಶ್ ಅವರು ದಿವಂಗತ ಸಿ ಕೆ ಜಾಫರ್ ಷರೀಫ್ ಅವರ ಮೊಮ್ಮಗ ಸಿ ಕೆ ಅಬ್ದುಲ್ ರಹಮಾನ್ ಷರೀಫ್ ಮತ್ತು ಕೃಷ್ಣಪ್ಪ ಆರ್ ಅವರ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ. ಮಾಜಿ ಸಚಿವ ರಹೀಮ್ ಖಾನ್ ಅವರ ಬೀದರ್‌ ಕ್ಷೇತ್ರದಲ್ಲಿ ಆರು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದು, ಅವರಲ್ಲಿ ಐವರು ಮುಸ್ಲಿಮರಾಗಿದ್ದಾರೆ. ‘ಟಿಕೆಟ್ ಸಿಗದಿರುವ ಆತಂಕದಲ್ಲಿ ಹಾಲಿ ಶಾಸಕರು ಇದ್ದಾರೆ. ಟಿಕೆಟ್ ಸಿಕ್ಕರೂ ಸಿಗದವರಿಂದ ಬಂಡಾಯದ ಬಿಸಿ ಕಾಂಗ್ರೆಸ್‌ಗೆ ತಟ್ಟಲಿದೆ. ಇದು ಕೈ ಪಾಳಯದಲ್ಲಿ ಆತಂಕ ಸೃಷ್ಟಿಸಿದೆ’ ಎಂದು ಮೂಲಗಳು ತಿಳಿಸಿವೆ.

 ಕೋಲಾರ ಟಿಕೆಟ್‌ಗಾಗಿ ಒಂಬತ್ತು ಆಕಾಂಕ್ಷಿಗಳು

2018ರಲ್ಲಿ ಜೆಡಿಎಸ್‌ ಕೋಲಾರ ಕ್ಷೇತ್ರವನ್ನು ಗೆದ್ದುಕೊಂಡಿದೆ. ಜೆಡಿಎಸ್‌ ಶಾಸಕ ಶ್ರೀನಿವಾಸಗೌಡ ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಲ್ಲಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಇದಕ್ಕೂ ಮುನ್ನವೇ ಕಾಂಗ್ರೆಸ್‌ನಿಂದ ಮಾಜಿ ವಿಧಾನಪರಿಷತ್‌ ಸಭಾಪತಿ ವಿ ಆರ್‌ ಸುದರ್ಶನ್‌, ಮಾಜಿ ಎಂಎಲ್‌ಸಿ ಸಿ ಆರ್‌ ಮನೋಹರ್‌ ಸೇರಿದಂತೆ ಒಂಬತ್ತು ಆಕಾಂಕ್ಷಿಗಳು ಅರ್ಜಿ ಸ್ವೀಕರಿಸಿದ್ದರು. ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸುತ್ತಿರುವುದೇನೋ ನಿಜ. ಆದರೆ, ಉಳಿದ ಟಿಕೆಟ್‌ ಆಕಾಂಕ್ಷಿಗಳು ಇದಕ್ಕೆ ಪೂರ್ಣವಾಗಿ ಒಪ್ಪಲಿದ್ದಾರೆಯೇ ಎಂಬುದನ್ನು ಕಾಲವೇ ಹೇಳಲಿದೆ.

  


Spread the love

About Laxminews 24x7

Check Also

ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಾಮಗಾರಿ ಕೈಗೊಳ್ಳಿ :ಶಾಸಕ ರಾಜು ಶೆಠ್

Spread the love ಫ್ಲೈಓವರ್ ಕಾಮಗಾರಿಗೆ ಸಂಬಂಧಿಸಿದ ಪ್ರಮುಖ ಪ್ರದೇಶಗಳ ಪರಿಶೀಲನೆ ನಾಗರಿಕರ ಸುರಕ್ಷತೆ, ತುರ್ತು ಸೇವೆಗಳ ಪ್ರವೇಶ ಮಾರ್ಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ