ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಚರ್ಚೆ ನಡೆದಿರುವ ಬೆನ್ನಲ್ಲೇ ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಯುವುದು ಸುರಕ್ಷಿತವೇ ಎಂಬ ಚಿಂತನೆಯೂ ಚಾಲ್ತಿ ಪಡೆದಿದೆ.
ಕೋಲಾರದೊಂದಿಗೆ ಬಾದಾಮಿ ಅಥವಾ ವರುಣಾದಿಂದ ಸ್ಪರ್ಧಿಸುವುದು ಸೂಕ್ತ ಎಂದು ಸಿದ್ದು ಆಪ್ತರು ಒತ್ತಡ ಹಾಕುತ್ತಿದ್ದು, ಇದೀಗ ‘ಚೆಂಡು’ ಹೈಕಮಾಂಡ್ ಅಂಗಳ ತಲುಪುವ ಲಕ್ಷಣಗಳಿವೆ. ಕೋಲಾರದಲ್ಲಿ ಮಾತ್ರ ಸ್ಪರ್ಧಿಸಿ ಅಪಾಯವನ್ನು ಮೈಮೇಲೆ ಎಳೆದು ಕೊಳ್ಳು ವುದು ಬೇಡ ಎಂಬುದು ಆಪ್ತರ ಸಲಹೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಒಬ್ಬರಿಗೆ ಒಂದೇ ಕ್ಷೇತ್ರ ಎಂಬ ಸಂದೇಶ ರವಾನಿ ಸಿದ್ದಾರೆ. ಹಾಗಾಗಿ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಸಿದ್ದ ಆಪ್ತರು ವರಿಷ್ಠರ ಮೇಲೂ ಒತ್ತಡ ಹೇರ ತೊಡಗಿದ್ದಾರೆ ಎನ್ನಲಾಗಿದೆ. ಆದರೆ ಎರಡು ಕ್ಷೇತ್ರದ ಸ್ಪರ್ಧೆಯಿಂದ ಬೇರೆಯೇ ಸಂದೇಶ ರವಾನೆಯಾಗುತ್ತದೆ ಎನ್ನುತ್ತಿದ್ದಾರೆ ಸಿದ್ದು.
ಸದ್ಯದಲ್ಲೇ ಮಾಜಿ ಸಚಿವ ಜಮೀರ್ ಅಹಮದ್ ಸೇರಿ ಸಿದ್ದರಾಮಯ್ಯ ಆಪ್ತರು ದಿಲ್ಲಿಗೆ ತೆರಳಿ ವರಿಷ್ಠರಲ್ಲಿ 2 ಕ್ಷೇತ್ರದಿಂದ ಸ್ಪರ್ಧಿ ಸಲು ಅವಕಾಶ ಕೋರುವ ಸಾಧ್ಯತೆ ಇದೆ.
ಆತಂಕ ಏಕೆ?
ಸಿದ್ದರಾಮಯ್ಯ ಆವರನ್ನು ಸೋಲಿಸಲು ಜೆಡಿಎಸ್-ಬಿಜೆಪಿ ಒಂದಾಗಿ ಕೋಲಾರ ಕ್ಷೇತ್ರದಲ್ಲೇ ಕಟ್ಟಿಹಾಕಲು ಕಾರ್ಯ ತಂತ್ರ ರೂಪಿಸಲಾಗುತ್ತಿದೆ ಎಂಬ ಆತಂಕ ಅವರ ಬೆಂಬಲಿಗರದ್ದು.
ಸಿದ್ದುವಿನ ಕೋಲಾರ ಸ್ಪರ್ಧೆ ಬಗ್ಗೆ ಡಿ.ಕೆ.ಶಿವಕುಮಾರ್ ಇದುವರೆಗೂ ಯಾವ ಪ್ರತಿಕ್ರಿಯೆ ಯನ್ನೂ ನೀಡಿಲ್ಲ. ಹಿರಿಯ ಕಾಂಗ್ರೆಸ್ ಮುಖಂಡರೂ ಮೌನ ವಹಿಸಿದ್ದಾರೆ. ವೇದಿಕೆಯಲ್ಲಿ ತಮ್ಮ ಸ್ಪರ್ಧೆಯನ್ನು ಸಿದ್ದು ಘೋಷಿಸಿದಾಗ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಹೈಕಮಾಂಡ್ ಒಪ್ಪಿದರೆ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇನೆ ಎಂದಿದ್ದರು. ಹೀಗಾಗಿ, ಹೈಕಮಾಂಡ್ ನಿಲುವು ಬೇರೆ ಇರಬಹುದೇ ಎಂಬ ಮಾತು ಕೇಳಿಬರುತ್ತಿದೆ