ಮೈಸೂರು: ಅತ್ಯಾಚಾರ, ವೇಶ್ಯಾವಾಟಿಕೆ, ಗೂಂಡಾ ಪ್ರಕರಣಗಳ ಆರೋಪಿ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿಯನ್ನು (51) ಪೊಲೀಸರು ಗುಜರಾತ್‌ನ ಅಹಮದಾಬಾದ್‌ನಲ್ಲಿ ಶುಕ್ರವಾರ ಬಂಧಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಡಿಜಿಪಿ ಅಲೋಕ್ ಕುಮಾರ್, ‘ಪ್ರತಿದಿನ ಸ್ಥಳ ಬದಲಾಯಿಸುತ್ತಿದ್ದ ಆರೋಪಿಯ ಜೊತೆಗೆ ಆತನ ನಿಕಟವರ್ತಿಗಳಾದ ಕೇರಳದ ಶ್ರುತೇಶ್ (35) ಮತ್ತು ರಾಮ್‌ಜಿ (45) ಎನ್ನುವವರನ್ನು ಬಂಧಿಸಲಾಗಿದೆ.
ಎರಡು ದಿನಗಳ ಹಿಂದೆ ಮೈಸೂರಿನ ಮಧುಸೂದನ ಎಂಬಾತನನ್ನು ಬಂಧಿಸಲಾಗಿತ್ತು’ ಎಂದು ತಿಳಿಸಿದರು.
‘ತಲೆ ಮರೆಸಿಕೊಂಡಿದ್ದ ಆರೋಪಿ ಯು ಕೇರಳ, ಮಹಾರಾಷ್ಟ್ರ, ರಾಮ ನಗರ, ಬೆಂಗಳೂರಿನಲ್ಲಿ ನೆಲೆ ಬದಲಿಸುತ್ತಿದ್ದ. ಕೊನೆಗೆ, ಗುಜರಾತಿನಲ್ಲಿರುವ ಮಾಹಿತಿ ಸಿಕ್ಕಿದ್ದರಿಂದ ಮೈಸೂರು, ರಾಮನಗರ, ಮಂಡ್ಯ ಹಾಗೂ ರಾಯಚೂರು ಜಿಲ್ಲೆಯ ಹಿರಿಯ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತ್ತು. ಎಫ್‌ಐಆರ್ ದಾಖಲಾದ ಹತ್ತು ದಿನಗಳ ನಂತರ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ವಿವರ ನೀಡಿದರು.
ಸಂತ್ರಸ್ತ ಮಹಿಳೆ ಹಾಗೂ ಅವರ ಕುಟುಂಬದ ಸದಸ್ಯರು ಒಡನಾಡಿ ಸೇವಾ ಸಂಸ್ಥೆಯ ನೆರವು ಪಡೆದು ದೂರು ದಾಖಲಿಸಿದ್ದರು. ವರದಕ್ಷಿಣೆ ನಿಷೇಧ ಕಾಯ್ದೆ, ಪರಿಶಿಷ್ಟರ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ, ಐಪಿಸಿ 506 (ಉದ್ದೇಶಪೂರ್ವಕ ಅವಹೇಳನ, ಮನಶಾಂತಿ ಕೆಡಿಸುವ ಪ್ರಯತ್ನ), 504 (ಕ್ರಿಮಿನಲ್ ಪಿತೂರಿ), 376 (ಅತ್ಯಾಚಾರ), 270 (ಪ್ರಾಣಹಾನಿಕರವಾದ ಸೋಂಕು ಹರಡುವ ಯತ್ನ), ಬಲವಂತದ ಗರ್ಭಪಾತ (313) ಹಾಗೂ 323 (ಹಲ್ಲೆ), 498ಎ (ಕೌಟುಂಬಿಕ ದೌರ್ಜನ್ಯ) ಅಡಿ ಪ್ರಕರಣ ದಾಖಲಿಸಲಾಗಿತ್ತು.
‘ಅಷ್ಟೆಲ್ಲ ಪ್ರಕರಣಗಳಿದ್ದರೂ ಅವ್ಯವಹಾರ ಮಾಡಲು ಆತನಿಗೆ ಸಾಧ್ಯವಾದದ್ದು ಹೇಗೆ’ ಎಂಬ ಪ್ರಶ್ನೆಗೆ, ‘ಎಲ್ಲವೂ ತನಿಖೆ ಆಗಲಿದೆ. ಸಭ್ಯತೆಯ ಮುಖವಾಡ ಧರಿಸಿದ್ದ ದುಷ್ಟ ವ್ಯಕ್ತಿ ಆತ’ ಎಂದರು.
ಇನ್ನೆರಡು ದಿನಗಳಲ್ಲಿ ಮೈಸೂರಿಗೆ: ‘ಆರೋಪಿಯನ್ನು ಅಹಮದಾಬಾದ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯದಿಂದ ‘ಟ್ರಾನ್ಸಿಟ್ ವಾರೆಂಟ್’ ಪಡೆದು ಮೈಸೂರಿಗೆ ಸ್ಥಳಾಂತರಿಸಿ, ಇಲ್ಲಿನ ನ್ಯಾಯಾಲಯಕ್ಕೆ ಎರಡು ದಿನಗಳಲ್ಲಿ ಹಾಜರುಪಡಿಸಲಾಗುವುದು’ ಎಂದರು.
ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿ ಮುತ್ತುರಾಜ್ ಎಂ., ಎಸಿಪಿ ಎಂ.ಶಿವಶಂಕರ್, ಎಸ್ಪಿಗಳಾದ ರಾಮನಗರದ ಡಾ.ಸಂತೋಷ್ ಬಾಬು, ಮಂಡ್ಯದ ಯತೀಶ್ ಎನ್., ರಾಯಚೂರಿನ ನಿಖಿಲ್ ಇದ್ದರು.
ಆತನ ವಿರುದ್ಧ, ಪರಿಶಿಷ್ಟ ಸಮುದಾಯದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಹಲ್ಲೆ ಮಾಡಿ, ಕೊಲೆ ಬೆದರಿಕೆಯೊಡ್ಡಿದ್ದ ಬಗ್ಗೆ ಜ.2ರಂದು ಇಲ್ಲಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆರೋಪಿಯನ್ನು ಬಂಧಿಸದಿರುವುದಕ್ಕೆ ವಿವಿಧ ಸಂಘಟನೆಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆಗಳನ್ನು ನಡೆಸಿದ್ದವು.
‘ರೂಪ ಬದಲಿಸಿದ್ದ ಆರೋಪಿ’
ಮೈಸೂರು: ‘ಕಪ್ಪು ಕೂದಲು, ದಪ್ಪ ಮೀಸೆಯುಳ್ಳ ತನ್ನ ಚಿತ್ರಗಳು ಮಾಧ್ಯಮದಲ್ಲಿ ಪ್ರಕಟವಾಗಿದ್ದರಿಂದ, ತಲೆ ಕೂದಲು, ಮೀಸೆ-ಗಡ್ಡವನ್ನೂ ತೆಗೆದು ಆರೋಪಿ ಚಹರೆಯನ್ನೇ ಬದಲಿಕೊಂಡಿದ್ದ’ ಎಂದು ಆತನ ಈಗಿನ ಚಿತ್ರವನ್ನು ಅಲೋಕ್ ಕುಮಾರ್ ಪ್ರದರ್ಶಿಸಿದರು. ‘ಆತನ ಮುಖ ಚಹರೆ ಬದಲಾಗಿದ್ದರೂ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ತಂಡಗಳಿಗೆ ಮುಖ್ಯಮಂತ್ರಿ ಬಹುಮಾನ ಘೋಷಿಸಿದ್ದಾರೆ’ ಎಂದು ತಿಳಿಸಿದರು.