ಬೆಂಗಳೂರು: ಪರಿಶಿಷ್ಟ ಸಮುದಾಯದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಹಲ್ಲೆ ಮಾಡಿ ಕೊಲೆ ಬೆದರಿಕೆಯೊಡ್ಡಿದ್ದ ಪ್ರಕರಣದ ಆರೋಪಿ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದ್ದನೆಂಬ ಆರೋಪ ಕೇಳಿಬಂದಿದೆ.
ಸ್ಯಾಂಟ್ರೊ ರವಿ ವಿರುದ್ಧ ಮೈಸೂರು ವಿಜಯನಗರ ಠಾಣೆಗೆ ಜ. 2ರಂದು ದೂರು ನೀಡಿರುವ ಎರಡನೇ ಪತ್ನಿ, ವಾಟ್ಸ್‌ಆಯಪ್ ಸಂದೇಶ ಹಾಗೂ ಸ್ಟೇಟಸ್‌ಗಳನ್ನು ಪುರಾವೆಯಾಗಿ ನೀಡಿದ್ದಾರೆ. ಆರೋಪಿ ರವಿ ತನ್ನ ಸ್ಟೇಟಸ್‌ಗಳಲ್ಲಿ ವರ್ಗಾವಣೆಗೆ ಸಂಬಂಧಪಟ್ಟಂತೆ ಹಲವು ಮಾಹಿತಿ ಹಂಚಿಕೊಂಡಿದ್ದಾನೆ.
‘ವಿಜಯನಗರದ ನಾಲ್ಕನೇ ಹಂತದಲ್ಲಿರುವ ಮನೆಯಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಎಂಟರ್‌ಪ್ರೈಸಸ್’ ಹೆಸರಿನ ಕಚೇರಿ ತೆರೆದಿದ್ದ ಸ್ಯಾಂಟ್ರೊ ರವಿ, ತಾನೊಬ್ಬ ಫೈನಾನ್ಶಿಯರ್ ಎಂಬುದಾಗಿ ಹೇಳಿಕೊಳ್ಳುತ್ತಿದ್ದ. ‘ಕೆ.ಎಸ್. ಮಂಜುನಾಥ್, ಬಿ.ಎ, ಫೈನಾನ್ಶಿಯರ್’ ಎಂಬ ಫಲಕವನ್ನೂ ಕಚೇರಿಯಲ್ಲಿ ನೇತು ಹಾಕಿದ್ದ’ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಕಚೇರಿ ಹೊಂದಿದ್ದ ರವಿ, ತೆರೆಮರೆಯಲ್ಲಿ ರಾಜಕಾರಣಿಗಳು ಹಾಗೂ ಅವರ ಕುಟುಂಬದವರ ಜೊತೆ ಒಡನಾಟವಿಟ್ಟುಕೊಂಡು ವರ್ಗ ಮಾಡಿಸುತ್ತಿದ್ದನೆಂಬ ಆರೋಪ ಎದುರಿಸುತ್ತಿದ್ದಾನೆ. ವೇಶ್ಯಾವಾಟಿಕೆ ಹಾಗೂ ಹಣವೇ ವರ್ಗಾವಣೆಯ ಅಸ್ತ್ರವಾಗಿತ್ತೆಂಬುದನ್ನು ಪುರಾವೆಗಳು ಹೇಳುತ್ತಿವೆ.
‘ಅತ್ಯಾಚಾರ, ಹಲ್ಲೆ, ಜೀವ ಬೆದರಿಕೆ, ವರದಕ್ಷಿಣೆ ಕಿರುಕುಳ ಪ್ರಕರಣ ಸಂಬಂಧ ಸಂತ್ರಸ್ತೆ ದೂರು ನೀಡಿದ್ದಾರೆ. ಅದರನ್ವಯ ಮಾತ್ರ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಉಳಿದಂತೆ, ವರ್ಗಾವಣೆ ಹಾಗೂ ವೇಶ್ಯಾವಾಟಿಕೆ ಆಯಾಮದಲ್ಲಿ ತನಿಖೆ ನಡೆಸುವುದು ನಮ್ಮ ವ್ಯಾಪ್ತಿಗೆ ಮೀರಿದ್ದು’ ಎಂದು ಮೈಸೂರು ಕಮಿಷನರೇಟ್ ಪೊಲೀಸ್ ಅಧಿಕಾರಿಯೊಬ್ಬರುತಿಳಿಸಿದರು.