ಧಾರವಾಡ: ಬಿಜೆಪಿ ಸೇರ್ಪಡೆ ಸುದ್ದಿಗೆ ಮಾಜಿ ಸಚಿವ, ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಸ್ಪಷ್ಟನೆ ನೀಡಿದ್ದಾರೆ.ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ವಿನಯ್ ಕುಲಕರ್ಣಿ, ನಾನು ಯಾವ ಬಿಜೆಪಿ ನಾಯಕರನ್ನೂ ಭೇಟಿಯಾಗಿಲ್ಲ. ಬಿಜೆಪಿ ಸೇರುವ ಯಾವುದೇ ಪ್ರಸ್ತಾಪವೂ ನನ್ನ ಮುಂದೆ ಬಂದಿಲ್ಲ. ಎಲ್ಲವೂ ಮಾಧ್ಯಮಗಳ ಉಹಾಪೋಹ. ನಾನು ಬೆಳೆದ ಬಂದ ದಾರಿಯೇ ಬೇರೆ ಎಂದು ಹೇಳಿದರು.
ಮೊದಲ ಬಾರಿಗೆ ಪಕ್ಷೇತರ ಶಾಸಕನಾಗಿ ಆಯ್ಕೆಯಾಗಿದ್ದು, ಹೀಗಾಗಿ ಕಾರ್ಯಕರ್ತರು ಮತ್ತು ಎಲ್ಲ ಸಮಾಜದ ಜನ ನನ್ನ ಜೊತೆಯಲ್ಲಿದ್ದಾರೆ. ಕಾರ್ಯಕರ್ತರನ್ನ ಕೇಳದೇ ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಎಂಎಲ್‍ಸಿ ಸಿ.ಪಿ.ಯೋಗೇಶ್ವರ ಕುದುರೆ ಖರೀದಿಗೆ ನನ್ನ ಹಾಲಿನ ಡೈರಿಗೆ ಬಂದಿದ್ದರು. ನನ್ನಿಂದ ಆರು ಕುದುರೆ ತೆಗೆದುಕೊಂಡು ಹೋಗಿದ್ದಾರೆ. ಅದು ಖಾಸಗಿ ಭೇಟಿಯಾಗಿದ್ದು, ರಾಜಕೀಯ ಬಗ್ಗೆ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು.
ಸಿಬಿಐ ತನಿಖೆಯಿಂದ ತಪ್ಪಿಸಿಕೊಳ್ಳಲು ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ ಅಂತಾ ಸುದ್ದಿ ಆಗುತ್ತಿದೆ. ಬಿಜೆಪಿ ಸೇರಿದ್ರೂ ಈ ಕೇಸ್ ಗಳು ಇದ್ದೆ ಇರುತ್ತೆ. ನನ್ನ ಪರವಾಗಿ ಯಾವುದೇ ಸ್ವಮೀಜಿಗಳು ಬಿಜೆಪಿ ಜೊತೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.