ಹುಬ್ಬಳ್ಳಿ: ಪಂಚಮಸಾಲಿ ಸಮಾಜಕ್ಕೆ ಘೋಷಣೆ ಮಾಡಿರುವ 2ಡಿ ಮೀಸಲಾತಿಯಲ್ಲಿ ಸಾಕಷ್ಟು ಗೊಂಲದಗಳಿದ್ದು, ಕಾನೂನಾತ್ಮಕವಾಗಿ ಇದು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಸರಕಾರದ ಗೆಜೆಟ್ ಅಧಿಸೂಚನೆ ಅಥವಾ ಸ್ಪಷ್ಟ ಆದೇಶವಿಲ್ಲದ ಕಾರಣ ಜ.13 ರಂದು ಶಿಗ್ಗಾವಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಡಿ.29 ಅಂತಿಮ ಹೋರಾಟವಾಗಿತ್ತು. 2ಎ ಮೀಸಲಾತಿ ನೀಡಿದರೆ ಸನ್ಮಾನ ಇಲ್ಲದಿದ್ದರೆ ಸುವರ್ಣಸೌಧ ಮುತ್ತಿಗೆ ಎನ್ನುವುದಾಗಿತ್ತು. ಆದರೆ ಅಂದು ಮುಖ್ಯಮಂತ್ರಿಗಳು ತಾಯಿಯ ಮೇಲೆ ಆಣೆ ಮಾಡಿದ್ದಾರೆ. ಮೀಸಲಾತಿ ನೀಡುವುದಕ್ಕೆ ಬದ್ಧರಾಗಿದ್ದಾರೆ ಎನ್ನುವ ಭರವಸೆ ವ್ಯಕ್ತವಾದ ಕಾರಣ ಮುತ್ತಿಗೆಯಿಂದ ಹಿಂದೆ ಸರಿದಿದ್ದೆವು. ಆದರೆ ಪಂಚಮಸಾಲಿ ಸಮಾಜಕ್ಕೆ 2ಡಿ ರಚಿಸುವುದಾಗಿ ಮಾಡಿರುವ ಘೋಷಣೆಯಲ್ಲಿ ಯಾವುದೇ ಸ್ಪಷ್ಟತೆಯಿಲ್ಲ. ಈ ಕುರಿತು ಸ್ಪಷ್ಟತೆ ನೀಡುವ ಕೆಲಸ ಸರಕಾರ ಮಾಡುತ್ತಿಲ್ಲ. ಹೀಗಾಗಿ ಜ.13 ರಂದು ಶಿಗ್ಗಾವಿಯಲ್ಲಿರುವ ಮುಖ್ಯಮಂತ್ರಿಗಳ ನಿವಾಸದ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಸರಕಾರ ಘೋಷಣೆ ಮಾಡಿರುವ 2ಡಿ ಮೀಸಲಾತಿ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಲಾಗಿದೆ. 2ಡಿ ರಚನೆ ಅಸಾಧ್ಯ ಹಾಗೂ ಆರ್ಥಿಕ ಹಿಂದುಳಿದ ವರ್ಗಗಳ ಮೀಸಲಾತಿ ವರ್ಗ ಮಾಡಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2ಡಿ ಮೀಸಲಾತಿ ರಚನೆ ಕುರಿತು ಸಾಕಷ್ಟು ವಿರೋಧ ಹಾಗೂ ಗೊಂದಲಗಳು ಕೇಳಿಬರುತ್ತಿದ್ದರೂ ಸರಕಾರ ಸ್ಪಷ್ಟಪಡಿಸುತ್ತಿಲ್ಲ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಐದು ಬಾರಿ ನೀಡಿದ ಮಾತು ಮುರಿದಿದ್ದಾರೆ. ಇನ್ನೊಂದೆಡೆ ಆಯೋಗದ ಅಂತಿಮ ವರದಿಗೆ ಇನ್ನೂ ಒಂದು ವರ್ಷ ಬೇಕಾಗುತ್ತದೆ ಎನ್ನುವ ಮಾಹಿತಿಯಿದೆ. ಹೀಗಾಗಿ ಸಮಾಜದ ಜನರ ಆಕ್ರೋಷ ಹೆಚ್ಚಾಗುತ್ತಿದೆ. ಪುನಃ ಹೋರಾಟ ಆರಂಭಿಸುವ ನಿಟ್ಟಿನಲ್ಲಿ ಒಂದು ದಿನದ ಪ್ರತಿಭಟನೆ ಹಮ್ಮಿಕೊಂಡಿದ್ದು, ಅದೇ ಸಂದರ್ಭದಲ್ಲಿ ಮುಂದಿನ ಹೋರಾಟದ ರೂಪರೇಷೆಗಳನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.
Laxmi News 24×7