ಚಿಕ್ಕೋಡಿ: ಚಿಕ್ಕೋಡಿ ನಗರದಲ್ಲಿ ನಿರ್ಮಾಣವಾಗುತ್ತಿರುವ ಕಿತ್ತೂರ ರಾಣಿ ಚೆನ್ನಮ್ಮ ಪುತ್ಥಳಿ ನಿರ್ಮಾಣಕ್ಕೆ ಕೆಲವು ರಾಜಕೀಯ ಹಿತಾಸಕ್ತಿಗಳು ವಿರೋಧ ಮಾಡುತ್ತಿರುವುದನ್ನು ಬಿಜೆಪಿ ಖಂಡಿಸುತ್ತದೆ. ಪುತ್ಥಳಿ ನಿರ್ಮಾಣಕ್ಕೆ ಬೇಕಾದ ಅನುಮತಿ ಕುರಿತು ಈಗಾಗಲೇ ಜಿಲ್ಲಾಧಿಕಾರಿ ಮತ್ತು ಸಂಬಂಧಿಸಿದ ಸಚಿವರ ಜೊತೆ ಮಾತುಕತೆ ನಡೆಸಲಾಗಿದೆ ಯಾರು ದೃತಿಗೆಡಬಾರದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ಚಿಕ್ಕೋಡಿ ನಗರದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ಪುತ್ಥಳಿ ನಿರ್ಮಾಣದ ತಡೆಯಾಜ್ಞೆ ಹಿನ್ನಲ್ಲೆಯಲ್ಲಿ ಪುರಸಭೆ ಮುಂಭಾಗದಲ್ಲಿ ಸೇರಿರುವ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಿತ್ತೂರ ರಾಣಿ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಇತಿಹಾಸ ಪುರುಷ ಮಹಿಳೆಯಾಗಿದ್ದು, ಚೆನ್ನಮ್ಮನ ಆದರ್ಶ ಇಂದಿನ ಯುವಪೀಳಿಗೆಗೆ ಮಾದರಿಯಾಗಿದೆ. ಈ ಹಿನ್ನಲ್ಲೆಯಲ್ಲಿ ಚೆನ್ನಮ್ಮನ ಪುತ್ಥಳಿ ಚಿಕ್ಕೊಡಿ ನಗರದಲ್ಲಿ ನಿರ್ಮಾಣ ಮಾಡುವ ಕಾರ್ಯ ಕೈಗೊಳ್ಳಲಾಗಿದೆ. ಪುರಸಭೆಯಲ್ಲಿ ಠರಾವು ಪಾಸು ಮಾಡಿ ಬರುವ ಜ 16 ರಂದು ಪುತ್ಥಳಿ ಅನಾವರಣ ಮಾಡಲು ಪುರಸಭೆ, ವ್ಯಾಪಾರ ಸಂಘ ಮತ್ತು ಪುತ್ಥಳಿ ಅನಾವರಣ ಸಮಿತಿ ನಿರ್ಧರಿಸಿತ್ತು. ಆದರೆ ಕಾಂಗ್ರೆಸ್ ನಾಯಕರು ಚೆನ್ನಮ್ಮನ ಪುತ್ಥಳಿ ನಿರ್ಮಾಣಕ್ಕೆ ಹಿಂದೆ ನಿಂತು ವಿರೋಧ ಮಾಡಿ ಅಧಿಕಾರಿಗಳ ಮೂಲಕ ಪುತ್ಥಳಿ ನಿರ್ಮಾಣ ಮಾಡುವ ಜಾಗ ಸರಿಯಿಲ್ಲ ಎನ್ನುವ ಮೂಲಕ ವಿರೋಧ ಮಾಡುವುದನ್ನು ಬಿಜೆಪಿ ಖಂಡಿಸುತ್ತದೆ ಎಂದರು.