ನಾಗರಮುನ್ನೋಳಿ: ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ಸಲುವಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡು ದಶಕ ಕಳೆದಿದೆ. ಆದರೆ, ಕಳೆದ ಏಳು ತಿಂಗಳಿಂದ ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ. ಇದರಿಂದ ಜನರ ಕೊಡ ನೀರಿಗೂ ಮೈಲುದ್ದ ಅಲೆಯಬೇಕಾದ ಸ್ಥಿತಿ ಬಂದಿದೆ.
ನಾಗರಮುನ್ನೋಳಿ ಹೋಬಳಿ ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರು ಕೊಡಬೇಕು ಎಂಬ ಉದ್ದೇಶದಿಂದ ಘಟಪ್ರಭಾ ನದಿಯಿಂದ ಬಹುಗ್ರಾಮ ಯೋಜನೆ 2012-13ರಲ್ಲಿ ಮಂಜೂರಾಗಿತ್ತು. ₹15.88 ಕೋಟಿ ಅನುದಾನ ಬಳಕೆಯಾಗಿದೆ. 2017ರಲ್ಲಿ ಕಾಮಗಾರಿ ಮುಕ್ತಾಯಗೊಳಿಸಲಾಗಿದೆ. ಆದರೆ, ಕಾಮಗಾರಿ ಮೇಲ್ವಿಚಾರಣೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ ಕಾರಣ, ಸಮರ್ಪಕ ನೀರು ದೊರೆಯಲಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ನಾಗರಮುನ್ನೋಳಿ ಹೋಬಳಿಯ ಬೆಳಗಲಿ, ಇಟನಾಳ, ಬೆಳಕೂಡ, ಉಮರಾಣಿ, ಡೋಣವಾಡ, ಕರಗಾಂವ, ಬಂಬಲವಾಡ, ಕುಂಗಟೋಳಿ, ಹಂಚಿನಾಳ, ವಿದ್ಯಾನಗರ ಸೇರಿದಂತೆ 11 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆ ಇದು. ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಬೇಕಾದ ಕಾಮಗಾರಿ ಎಂಟು ವರ್ಷ ಹಿಡಿಯಿತು. ಹಲವು ಕಡೆ ಹಳೆಯ ಪೈಪ್‌ಗಳನ್ನೇ ಅಳವಡಿಸಲಾಗಿದೆ. ಆದರೂ ಅದಿಕಾರಿಗಲೂ ಚಕಾರ ಎತ್ತಿಲ್ಲ ಎನ್ನುತ್ತಾರೆ ಜನ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಈ ಯೋಜನೆಯ ದುರಸ್ತಿಗೆ ಮುಂದಾಗಬೇಕು. ಹಿಂದೆ ಇದ್ದ ಗುತ್ತಿಗೆದಾರ ಅವಧಿ ಮುಗಿದು 7 ತಿಂಗಳು ಕಳೆದರೂ ಹೊಸ ಗುತ್ತಿಗೆದಾರನ್ನು ನೇಮಿಸಿಲ್ಲ. ಕೊಟಬಾಗಿ ನದಿಗೆ ಜೋಡಿಸದ ಪೈಪುಗಳೂ ಕಿತ್ತುಹೋಗಿವೆ. ಶೀಘ್ರ ಸರಿಪಡಿಸಬೇಕು ಎಂಬುದು ಜನರ ಆಗ್ರಹ.
ಇವರೇನಂತಾರೆ?
ಶೀಘ್ರದಲ್ಲೇ ಜನರಿಗೆ ನೀರು
ಸರ್ಕಾರಿ ಯೋಜನೆ ಈ ರೀತಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಬೇಸರ ತಂದಿದೆ. ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಶೀಘ್ರದಲ್ಲೇ ಜನರಿಗೆ ನೀರು ಕೊಡುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಎಂಜಿನಿಯರ್‌ಗಳ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ.
-ಡಿ.ಎಂ.ಐಹೋಳೆ, ಶಾಸಕ
11 ಹಳ್ಳಿಗೆ ನೀರು ಪೂರೈಕೆ
ಯೋಜನೆ ಮಂಜೂರಾದಾಗ ನದಿ ತೀರದಲ್ಲಿ ಜಾಕ್‌ವೆಲ್ ನಿರ್ಮಾಣ ಮಾಡಬೇಕಾಗಿತ್ತು, ಅದನ್ನು ಮಾಡಿಲ್ಲ. ಈಗ ನದಿ ತೀರದಲ್ಲಿ ಜಾಕ್‌ವೆಲ್ ನಿರ್ಮಾಣ ಮಾಡಲು ಮತ್ತು ಯೋಜನೆ ಸರಿಪಡಿಸಲು ಅಂದಾಜು ಪತ್ರಿಕೆ ತುಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಮಂಜೂರಾತಿ ಸಿಕ್ಕ ತಕ್ಷಣ ಕಾಮಗಾರಿಗೆ ಚಾಲನೆ ನೀಡಲಾಗುವುದು. ಎಲ್ಲ 11 ಹಳ್ಳಿಯ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುವುದು.
-ಆರ್.ಬಿ.ಬಿರಾದಾರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಯೋಜನೆಯ ಚಿಕ್ಕೋಡಿ ಉಪವಿಭಾಗ
ಬೇಗ ನೀರು ಪೂರೈಕೆಗೆ ಕ್ರಮ
ಬಹುಗ್ರಾಮ ಕುಡಿಯುವ ನೀರು ಯೋಜನೆಯ ಸಮಸ್ಯೆ ಬಗೆಹರಿಸಲು ಈಗಾಗಲೇ ಎರಡು ಬಾರಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆ ಮಾಡಲಾಗಿದೆ. ಆದಷ್ಟು ಬೇಗ ನೀರು ಪೂರೈಕೆ ಮಾಡಲು ಕ್ರಮಕೈಗೊಳ್ಳಲಾಗುವುದು.
-ನಿಂಗಪ್ಪ ಕಳಸತಿ, ತಾಲ್ಲೂಕು ಪಂಚಾಯಿತಿ ಇಒ, ಚಿಕ್ಕೋಡಿ