ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ವಿಚಾರ ಇಂದು ಸಂಜೆ ಐದು ಗಂಟೆಗೆ ಸಚಿವ ಸಂಪುಟ ಸಭೆ ಇದ್ದು, ಎಲ್ಲರ ಚಿತ್ತ ಸಿಎಂ ಸಚಿವ ಸಂಪುಟದತ್ತ ಇದೆ ಎಂದು ಕೂಡಲ ಸಂಗಮ ಪಂಚಮಸಾಲಿ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಗುರುವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗಾಗಿ ಕಳೆದ ಎರಡೂ ವರ್ಷಗಳಿಂದ ನಿರಂತರವಾಗಿ ನಡೆದ ಹೋರಾಟ ಬೆಳಗಾವಿಯಲ್ಲಿ ಬಂದು ನಿಂತಿದೆ. ನಮ್ಮ ಸಮಾಜದ ಧ್ವನಿ ಸರಕಾರಕ್ಕೆ ಮುಟ್ಟಿದೆ. ಈ ಹಿನ್ನೆಲೆಯಲ್ಲಿ ಸರಕಾರ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಚಿವ ಸಿ.ಸಿ.ಪಾಟೀಲ ಸೇರಿದಂತೆ ನಮ್ಮ ನಿಯೋಗಕ್ಕೆ ಯಾವುದೇ ಕಾರಣಕ್ಕೂ ಮುತ್ತಿಗೆ ಹಾಕದಂತೆ ಮನವಿ ಮಾಡಿಕೊಂಡು, ಡಿ.29ರಂದು ಮೀಸಲಾತಿ ಕೊಡುವುದಾಗಿ ಭರವಸೆ ನೀಡಿದ್ದಾರೆ.
ಆದರೆ ಕೆಲ ಊಹಾಪೋಹಗಳ ಸುದ್ದಿಗಳು ಹರಿದಾಡುತ್ತಿದ್ದು, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವುದಕ್ಕೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ವಿಷಯದ ಕುರಿತು ನಾವು ಅಧ್ಯಯನ ಮಾಡಿದ್ದೇವೆ. ಅದಕ್ಕೂ, ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು.
ಕಾನೂನು ಹೋರಾಟ ಮಾಡುವವರು ಮಾಡಲು ಇಂದು ನಡೆಯುವ ಸಚಿವ ಸಂಪುಟದ ಸಭೆ ಮಹತ್ವದ್ದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ಸಮಾಜಕ್ಕೆ ಮೀಸಲಾತಿ ನೀಡಿ ಬಸವಣ್ಣನವರು ಆಗುತ್ತಾರೋ ಅಥವಾ ಕೆಂಗಣ್ಣಿಗೆ ಗುರಿಯಾಗುತ್ತಾರೋ ಎನ್ನುವುದನ್ನು ಕಾದು ನೋಡುತ್ತೇವೆ ಎಂದರು.
ಪಂಚಮಸಾಲಿ ಸಮಾಜದ ಬಾಂಧವರು ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳು ಬಾರದು. ಸಂಜೆ ಐದು ಗಂಟೆಯವರೆಗೆ ಕಾಯೋಣ. ಅಲ್ಲಿಯವರಗೂ ಎಲ್ಲ ಸಮಾಜದವರು ಶಾಂತರಾಗಿರಬೇಕು ಎಂದು ಮನವಿ ಮಾಡಿಕೊಂಡರು.
ಬಲಿಷ್ಠ ಸಮಾಜದವರಿಗೆ ಮೀಸಲಾತಿ ಕೊಡುವುದು ಬೇಡ ಎಂದಿದ್ದ ಮಾಜಿ ಸ್ಪೀಕರ್ ರಮೇಶ ಕುಮಾರ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಮೇಶ ಕುಮಾರ ಅವರ ಹೇಳಿಕೆಯನ್ನು ನಿರ್ಲಕ್ಷ್ಯ ಮಾಡಿದ್ದೇವೆ ಎಂದರು.