ಬೆಳಗಾವಿ, ಡಿ. 19: ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಿದ್ದು, ವಿಡಿ ಸಾವರ್ಕರ್ ಭಾವಚಿತ್ರ ವಿವಾದ ಪ್ರತಿಭಟನೆಯ ಕಿಡಿ ಹೊತ್ತಿಸಿದೆ. ಮೊದಲ ದಿನವೇ ಕಾಂಗ್ರೆಸ್ ಬಿಜೆಪಿ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ಮುಟ್ಟಿಸಲು ಪ್ರಯತ್ನಿಸಿದೆ.
ವಿಧಾನಸಭೆ ಸಭಾಂಗಣದಲ್ಲಿ ವಿಡಿ ಸಾವರ್ಕರ್ ಅವರ ಭಾವಚಿತ್ರವನ್ನು ಅನಾವರಣಗೊಳಿಸಿರುವುದನ್ನು ವಿರೋಧಿಸಿ ವಿಧಾನಸಭೆಯ ಹೊರಗೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ಶಾಸಕರು ಸುವರ್ಣಸೌಧದ ವಿಧಾನಸೌಧದ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಜವಾಹರ್ ಲಾಲ್ ನೆಹರೂ, ಕುವೆಂಪು, ವಾಲ್ಮೀಕಿ, ಕನಕದಾಸರು, ದೇವರಾಜ ಅರಸು ಸೇರಿದಂತೆ ಹಲವು ನಾಯಕರ ಚಿತ್ರಗಳನ್ನು ಕೈಯಲ್ಲಿ ಹಿಡಿದು ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ವಿಧಾನಸಭೆ ಆವರಣದಲ್ಲಿ ಫೋಟೋ ಅನಾವರಣ ಮಾಡಿರುವುದನ್ನು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವಿರೋಧಿಸಿದ್ದಾರೆ.
“ವಿಧಾನಸಭೆ ಕಲಾಪ ನಡೆಯಬಾರದು ಎಂಬುದು ಅವರ ಆಸೆಯಾಗಿದೆ. ಕಲಾಪವನ್ನು ಅಡ್ಡಿಪಡಿಸಲು ಬಯಸಿದ್ದಾರೆ. ಅವರ ವಿರುದ್ಧ ಸಾಕಷ್ಟು ಭ್ರಷ್ಟಾಚಾರದ ವಿಚಾರಗಳನ್ನು ನಾವು ಎತ್ತಲಿದ್ದೇವೆ ಎಂಬ ಕಾರಣಕ್ಕೆ ಈ ಫೋಟೋ ತಂದಿದ್ದಾರೆ. ಬಿಜೆಪಿಯವರಿಗೆ ಯಾವುದೇ ಅಭಿವೃದ್ಧಿ ಅಜೆಂಡಾ ಇಲ್ಲ” ಎಂದು ಶಾಸಕ ಡಿ.ಕೆ.ಶಿವಕುಮಾರ್ ಆಕ್ರೋಶ ಹೊರಹಾಕಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರದಿಂದ 10 ದಿನಗಳ ಕಾಲ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಿನಾಯಕ ದಾಮೋದರ ಸಾವರ್ಕರ್ ಅವರ ಫೋಟೋ ದೊಡ್ಡ ವಿವಾದವನ್ನು ಹುಟ್ಟು ಹಾಕುತ್ತದೆ ಎಂಬ ಬಗ್ಗೆ ಈಗಾಗಲೇ ವದಂತಿಯಿತ್ತು. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಟಾಪಟಿಗೂ ಕಾರಣವಾಗುವ ಸಾಧ್ಯತೆಯಿದೆ.
ಸರ್ಕಾರವು ವಿಧಾನಸಭೆ ಹಾಲ್‌ನಲ್ಲಿ ಮಹಾನ್ ವ್ಯಕ್ತಿಗಳ ಆರು ಚಿತ್ರಗಳನ್ನು ಅನಾವರಣ ಮಾಡಿಎ. ಅವುಗಳಲ್ಲಿ ಒಂದು ಸಾವರ್ಕರ್ ಅವರದ್ದು. ಅದು ನೇರವಾಗಿ ಸ್ಪೀಕರ್ ಕುರ್ಚಿಯ ಹಿಂದೆ ಹಾಕಲಾಗಿದೆ. ಇದು ಕಾಂಗ್ರೆಸ್ ಪ್ರತಿಭಟನೆಗೆ ಕಾರಣವಾಗಿದೆ.