ಶಿವಮೊಗ್ಗ: ಇಡೀ ರಾಜ್ಯದಲ್ಲಿಯೇ ಹಲವಾರು ಬಂಧೀಖಾನೆಗಳು ಕೊರೊನಾ ಪಾಸಿಟಿವ್ ಗಳಿಂದ ನಲುಗಿ ಹೋಗಿದ್ದರೂ, ಶಿವಮೊಗ್ಗದ ಜೈಲು ಮಾತ್ರ ಕೊರೊನಾ ಮುಕ್ತವಾಗಿದೆ. ಅಲ್ಲದೇ ಇದೀಗ ಈ ಜೈಲಿನಲ್ಲಿ ಸ್ಯಾನಿಟೈಸರ್ ಟನಲ್ ಅಳವಡಿಸಲಾಗಿದ್ದು, ಇದು ಕೂಡ ರಾಜ್ಯದಲ್ಲೇ ಪ್ರಪ್ರಥಮವಾಗಿದೆ.
ರಾಜ್ಯದಲ್ಲಿ ಅಷ್ಟೇ ಅಲ್ಲ ಭಾರತದಲ್ಲಿಯೇ ಅತ್ಯಂತ ವಿಶೇಷತೆ ಹೊಂದಿರುವ ಇಲ್ಲಿ ಬಂದು ನಿಂತ್ರೆ ಸಾಕು ಸ್ವಚ್ಛಂದ ಗಾಳಿ, ಉತ್ತಮ ಪರಿಸರ, ಸ್ವಚ್ಛತೆ, ಸುಂದರ ಪಾರ್ಕ್, ನಮ್ಮ ಕಣ್ಮನ ಸೆಳೆಯುತ್ತೆ. ಇಂತಹ ಸುಸಜ್ಜಿತವಾದ ಜೈಲು ಇಡೀ ಭಾರತದಲ್ಲಿಯೇ ಮತ್ತೊಂದಿಲ್ಲ ಎಂಬ ಹೆಗ್ಗಳಿಕೆ ನಡುವೆಯೇ ಇದು ಕೊರಿಯನ್ ಮಾದರಿ ಜೈಲು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಹೌದು. ಶಿವಮೊಗ್ಗದ ಈ ಕೇಂದ್ರ ಕಾರಾಗೃಹದಲ್ಲಿ ಬೇರೆ ಜೈಲುಗಳಂತೆ, ಇಲ್ಲಿ ಬ್ಯಾರಕ್ ಗಳಿಲ್ಲ. ಬದಲಾಗಿ ಇಲ್ಲಿ ಸೆಲ್ ಗಳಿವೆ. ಇಲ್ಲಿ ಒಟ್ಟು 269 ಸೆಲ್ ಗಳಿದ್ದು ಇಡೀ ಭಾರತದಲ್ಲಿಯೇ ಕೇವಲ ಸೆಲ್ ಗಳು ಮಾತ್ರ ಇರುವ ಜೈಲುಗಳೇ ಇಲ್ಲ. ಬದಲಾಗಿ ಬ್ಯಾರಕ್ ಗಳಿರುತ್ತವೆ. ಈ ಬ್ಯಾರಕ್ ಗಳಲ್ಲಿ 40 ರಿಂದ 50 ಜನ ಸಜಾ ಬಂಧಿಗಳಿರುತ್ತಾರೆ. ಆದರೆ ಈ ಜೈಲಿನಲ್ಲಿ ಸೆಲ್ ಗಳಿದ್ದು ಪ್ರತಿಯೊಂದು ಸೆಲ್ ನಲ್ಲಿ ಇಬ್ಬರಿಗೆ ಅವಕಾಶ ನೀಡಲಾಗಿದೆ. ಪ್ರತಿ ಸೆಲ್ ನಲ್ಲಿ ಬಾತ್ ರೂಂ, ಟಾಯ್ಲೆಟ್ ಸೇರಿದಂತೆ ಟಿ.ವಿ ಕೂಡ ಅಳವಡಿಸಲಾಗಿದೆ.
ಇಷ್ಟೇ ಅಲ್ಲದೇ ಓವರ್ ಹೆಡ್ ನೀರಿನ ಟ್ಯಾಂಕ್ ಕೂಡ ಇದ್ದು ಕೈಯಲ್ಲಿ ನೀರು ತೆಗೆದುಕೊಂಡು ಬರುವ ಪ್ರಮೆಯವೇ ಇಲ್ಲಿಲ್ಲ. ಇಲ್ಲಿ ಪ್ರತ್ಯೇಕವಾಗಿ ಮಹಿಳಾ ಬಂಧೀಖಾನೆ ಕೂಡ ಇದ್ದು ಇದೀಗ ಈ ಜೈಲಿನಲ್ಲಿ ವಿಶೇಷತೆಯಿಂದ ಕೂಡಿರುವ ಸ್ಯಾನಿಟೈಸರ್ ಮಾಡುವ ಟನಲ್ ಅಳವಡಿಸಲಾಗಿದೆ. ಇದು ಇದೀಗ ಪ್ರಮುಖ ಆಕರ್ಷಣೆಯಾಗಿದೆ. ಸುಮಾರು 1 ಲಕ್ಷದ 2 ಸಾವಿರ ರೂ. ವೆಚ್ಚದಲ್ಲಿ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಮೂಲಕ ಈ ಯಂತ್ರ ಅಳವಡಿಸಲಾಗಿದೆ. ಎಲ್ಲೆಡೆ ಕೊರೊನಾ ಸೋಂಕು ಹರಡುವ ಭೀತಿ ಎದುರಾಗಿದ್ದು, ಈ ಕಾರಾಗೃಹದಲ್ಲಿ ಕೊರೊನಾ ಸೋಂಕು ಹರಡಬಾರದೆಂಬ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಿ ಈ ವಿಶೇಷ ಯಂತ್ರ ಇಲ್ಲಿ ಅಳವಡಿಸಲಾಗಿದೆ.
ಅಂದಹಾಗೆ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಈ ಸ್ಯಾನಿಟೈಸರ್ ಟನಲ್ ಯಂತ್ರ ವಿಶೇಷವಾಗಿದ್ದು, ವ್ಯಕ್ತಿಯೊಬ್ಬರು ಹೋಗಿ ಈ ಯಂತ್ರದೊಳಗೆ ಹೋಗಿ ನಿಂತ್ರೆ ಸಾಕು, ಮೂರು ಪೈಪ್ ಗಳಲ್ಲಿ ಸ್ಪಿಂಕ್ಲರ್ ಮೂಲಕ ಇಡೀ ದೇಹವನ್ನು ಸ್ಯಾನಿಟೈಸ್ ಮಾಡುತ್ತದೆ. ಅದರಲ್ಲೂ ಬಯೋ ಆಗ್ರ್ಯಾನಿಕ್ ಸ್ಯಾನಿಟೈಸರ್ ಮೂಲಕ ದೇಹವನ್ನೆಲ್ಲಾ ಸಿಂಪಡಣೆ ಮಾಡಿದ್ರೂ ಕೂಡ ದೇಹಕ್ಕೆ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಸ್ಯಾನಿಟೈಸರನ್ನು ಈ ಯಂತ್ರದಲ್ಲಿ ಅಳವಡಿಸಲಾಗಿದೆ. ಬಂಧೀಖಾನೆಯ ಸಿಬ್ಬಂದಿ, ಅಧಿಕಾರಿಗಳು, ಸಜಾಬಂಧಿಗಳು ಸೇರಿದಂತೆ ಯಾರೇ ಹೊರಗಿನಿಂದ ಬಂದರೂ ಕೂಡ ಈ ಟನಲ್ ನಿಂದಲೇ ಕಾರಾಗೃಹದ ಒಳಪ್ರವೇಶಿಸಬೇಕು. ಹೀಗಾಗಿ ಪ್ರತಿಯೊಬ್ಬ ಸಿಬ್ಬಂದಿ, ಸಜಾ ಬಂಧಿಗಳು ಸ್ಯಾನಿಟೈಸ್ ಆಗುವುದರಿಂದ ಈ ಕಾರಾಗೃಹದಲ್ಲಿ ಕೊರೊನಾ ಸೋಂಕು ಹರಡುವ ಮಾತು ದೂರ. ಹೀಗಾಗಿ ಇಲ್ಲಿನ ಅಧಿಕಾರಿಗಳು ಕೂಡ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಶಿವಮೊಗ್ಗದಿಂದ ಸುಮಾರು 12 ಕಿ.ಮೀ. ದೂರವಿರುವ ಕಾರಾಗೃಹದಲ್ಲಿ ಇದುವರೆಗೂ ಒಂದೇ ಒಂದು ಕೊರೊನಾ ಕೇಸುಗಳು ಕಂಡಿಲ್ಲ. ಇದೀಗ ಈ ವಿಶೇಷ ಯಂತ್ರ ಅಳವಡಿಕೆ ಮೂಲಕ ಕೊರೊನಾ ಸೋಂಕು ಇನ್ನೂ ದೂರವಾಗಲಿದೆ ಎಂಬ ವಿಶ್ವಾಸವಿದೆ. ಇಲ್ಲಿನ ಅಧಿಕಾರಿಗಳ ಆಸಕ್ತಿಯಿಂದಾಗಿ ಈ ವಿಶೇಷ ಸ್ಯಾನಿಟೈಸರ್ ಟನಲ್ ಯಂತ್ರ ಅಳವಡಿಕೆ ಮೂಲಕ ಇಲ್ಲಿ ಸಜಾ ಬಂಧಿಗಳು ಕೂಡ ಸುರಕ್ಷಿತ.