ಪಣಜಿ: ಗೋವಾದಲ್ಲಿ ನಡೆಯಲಿರುವ ವಿಶ್ವ ಪ್ರಸಿದ್ಧ ‘ಸನ್‍ಬರ್ನ್ ಫೆಸ್ಟಿವಲ್’ಗೆ ಗೋವಾದ ಪ್ರವಾಸೋದ್ಯಮ ಇಲಾಖೆ ಅಂತಿಮವಾಗಿ ಅನುಮತಿ ನೀಡಿದೆ. ಸಂಗೀತೋತ್ಸವವು ಡಿಸೆಂಬರ್ 28 ರಿಂದ 30 ರವರೆಗೆ ಗೋವಾದ ವಾಗಾತೋರ್‍ನಲ್ಲಿ ನಡೆಯಲಿದೆ.
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಈ ಉತ್ಸವವನ್ನು ನಡೆಸಲು ಸಾಧ್ಯವಾಗಲಿಲ್ಲ. ಪ್ರಸಕ್ತ ವರ್ಷ ಈ ಸಂಗೀತ ಮಹೋತ್ಸವದಲ್ಲಿ ದೇಶ ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಪಾಲ್ಗೊಳ್ಳುವ ಇರೀಕ್ಷೆಯಿದೆ ಎಂದೇ ಹೇಳಲಾಗಿದೆ.
ಗೋವಾ ಪ್ರವಾಸೋದ್ಯಮ ಇಲಾಖೆಯು ಸನ್‍ಬರ್ನ್ ಉತ್ಸವಕ್ಕೆ ಪರವಾನಗಿ ನೀಡುವ ಸಂದರ್ಭದಲ್ಲಿ ಸಂಘಟಕರಿಗೆ ಕೆಲವು ಷರತ್ತುಗಳನ್ನು ವಿಧಿಸಿದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ, ಅವರು ಭಾರೀ ದಂಡವನ್ನು ಪಾವತಿಸಬೇಕಾಗುತ್ತದೆ. 17,700 ಸಂಸ್ಕರಣಾ ಶುಲ್ಕವನ್ನು ಪಾವತಿಸುವಂತೆ ಪ್ರವಾಸೋದ್ಯಮ ಇಲಾಖೆ ಸಂಘಟಕರಿಗೆ ತಿಳಿಸಿದೆ. ಅಲ್ಲದೆ 1 ಕೋಟಿ 10 ಲಕ್ಷ ರೂ.ಗಳ ಭದ್ರತಾ ಠೇವಣಿಯನ್ನೂ ಪಾವತಿಸುವಂತೆ ತಿಳಿಸಲಾಗಿದೆ. ಅದರಲ್ಲೂ ಪ್ರವಾಸೋದ್ಯಮ ಇಲಾಖೆ ವಿಧಿಸಿರುವ ನಿಬಂಧನೆಗಳನ್ನು ಉಲ್ಲಂಘಿಸಿದರೆ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.