ಉಡುಪಿ: ಮಲ್ಪೆಯ ಕಡಲ ಕಿನಾರೆಯಲ್ಲಿ ಮತ್ತೆ ತೇಲುವ ಸೇತುವೆ (ಫ್ಲೋಟಿಂಗ್ ಬ್ರಿಡ್ಜ್) ನಿರ್ಮಾಣವಾಗುತ್ತಿದ್ದು ಕೆಲವೇ ದಿನಗಳಲ್ಲಿ ಪ್ರವಾಸಿಗರಿಗೆ ಮುಕ್ತವಾಗಲಿದೆ.
ಕಳೆದ ಬಾರಿಯ ಅವಘಡ ಮತ್ತೊಮ್ಮೆ ಮರುಕಳಿಸಬಾರದು ಎಂಬ ದೃಷ್ಟಿಯಿಂದ ಈ ಬಾರಿ ಹೊರ ರಾಜ್ಯ ಹಾಗೂ ರಾಜ್ಯದ ಕಡಲ ತಜ್ಞರ ತಂಡಗಳು ತೇಲುವ ಸೇತುವೆಯ ಸಾಮರ್ಥ್ಯ, ಕಾರ್ಯಕ್ಷಮತೆಯನ್ನು ಪರೀಕ್ಷೆಗೊಳಪಡಿಸಿ ದೃಢೀಕರಿಸಿವೆ.
ತೇಲುವ ಸೇತುವೆ ಚಂಡಮಾರುತದಂತಹ ಪ್ರತಿಕೂಲ ವಾತಾವರಣವನ್ನು ತಡೆದುಕೊಳ್ಳಬಹುದೇ? ದೈತ್ಯ ಅಲೆಗಳು ಅಪ್ಪಳಿಸಿದರೆ ತಾಳಿಕೊಳ್ಳುವುದೇ ಎಂಬುದನ್ನು ವೈಜ್ಞಾನಿಕವಾಗಿ ಪರೀಕ್ಷೆ ಗೊಳಪಡಿಸಿದೆ.
ಜತೆಗೆ, ಅಲೆಗಳ ಏರಿಳಿತ, ಪ್ರತಿಕೂಲ ವಾತಾವರಣ ಹಾಗೂ ಸೇತುವೆ ಅಳವಡಿಸುವ ಜಾಗವನ್ನು ಪರಿಶೀಲಿಸಿರುವ ತಂಡ ಶೀಘ್ರ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಿದೆ. ಅಲ್ಲಿಂದ ಒಪ್ಪಿಗೆ ಸಿಕ್ಕ ಬಳಿಕ ತೇಲುವೆ ಸೇತುವೆ ಪ್ರವಾಸಿಗರ ಬಳಕೆಗೆ ಲಭ್ಯವಾಗಲಿದೆ.
ಗುಣಮಟ್ಟದ ಸೇತುವೆ:
ಕಳೆದ ಮೇನಲ್ಲಿ ಅಳವಡಿಸಲಾಗಿದ್ದ ತೇಲುವ ಸೇತುವೆ ಹಾಳಾಗಲು ಹಲವು ಕಾರಣಗಳಿವೆ. ಸೇತುವೆ ಅಳವಡಿಸಿದ ಕೂಡಲೇ ಚಂಡಮಾರುತ ಬೀಸಿದ್ದರಿಂದ ದೈತ್ಯ ಅಲೆಗಳು ಅಪ್ಪಳಿಸಿ ಸೇತುವೆಗೆ ಹಾನಿಯಾಯಿತು. ಸೇತುವೆಗೆ ಅಳವಡಿಸಿದ್ದ ಫಾಂಟೂನ್ಸ್‌ಗಳು ಕಿತ್ತುಬಂದಿದ್ದವು.
ಕಳೆದ ಬಾರಿಯ ತಪ್ಪು ಮತ್ತೊಮ್ಮೆ ಮರುಕಳಿಸಬಾರದು ಎಂಬ ದೃಷ್ಟಿಯಿಂದ ಈ ಬಾರಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ. ಅತ್ಯುತ್ತಮ ಗುಣಮಟ್ಟದ ತೇಲುವ ಸೇತುವೆಯನ್ನು ಹೊರಗಗಿನಿಂದ ಆಮದು ಮಾಡಿಕೊಂಡು ಅಳವಡಿಸಲಾಗಿದೆ ಎನ್ನುತ್ತಾರೆ ಮಲ್ಪೆ ಬೀಚ್‌ನ ಕಾರ್ಯ ನಿರ್ವಾಹಕ ಸುದೇಶ್ ಶೆಟ್ಟಿ.
ಗರಿಷ್ಠ ಸುರಕ್ಷತೆ:
ಸೇತುವೆ ಅಳವಡಿಸಿರುವ ಜಾಗದಲ್ಲಿ 2.5 ಮೀಟರ್ ಆಳ ಮಾತ್ರ ಇದ್ದು, ಪ್ರಾಣಾಪಾಯವಾಗುವ ಸಾಧ್ಯತೆಗಳು ತೀರಾ ಕಡಿಮೆ. ಆದರೂ ಪ್ರವಾಸಿಗರ ಸುರಕ್ಷತೆಗೆ ಗರಿಷ್ಠ ಒತ್ತು ನೀಡಲಾಗಿದೆ. 20 ಮಂದಿ ಲೈಫ್‌ಗಾರ್ಡ್‌ಗಳನ್ನು ನಿಯೋಜಿಸಲಾಗುವುದು. ಸೇತುವೆ ಹತ್ತುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಲೈಫ್ ಜಾಕೆಟ್ ಧರಿಸಬೇಕು.