ಬೆಳಗಾವಿ: ಇಲ್ಲಿನ ಹಿಂಡಲಗಾದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಈಚೆಗೆ ಜಿಲ್ಲಾ ಅಂಧತ್ವ ನಿವಾರಣಾಧಿಕಾರಿಗಳ ಕಾರ್ಯಾಲಯದ ಸಹಕಾರದೊಂದಿಗೆ ಕಾರಾಗೃಹದ 215 ಬಂದಿಗಳಿಗೆ ನೇತ್ರ ತಪಾಸನಾ ಶಿಬಿರ ನಡೆಯಿತು.
ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ, ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ ಕೃಷ್ಣಕುಮಾರ ಮಾತನಾಡಿ, ‘ಪಂಚೇಂದ್ರಿಯಗಳಲ್ಲಿ ಒಂದಾದ ಕಣ್ಣು ಅತೀ ಸೂಕ್ಷ್ಮವಾದ ಅಂಗ.
ಇದರ ಬಗ್ಗೆ ತಿಳಿವಳಿಕೆ ಹಾಗೂ ಕಾಳಜಿ ಅತೀ ಅವಶ್ಯಕ. ಕಾರಾಗೃಹದಲ್ಲಿ ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ವಿವಿಧ ಆರೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಎರಡನೇ ಬಾರಿಗೆ ಎಲ್ಲ ಬಂದಿಗಳಿಗೆ ನೇತ್ರ ತಪಾಸನಾ ಶಿಬಿರ ಆಯೋಜಿಸಲಾಗುತ್ತಿದೆ ಎಂದರು.
ನೇತ್ರಾಧಿಕಾರಿ ಟಿ.ಸೀತಾರಾಮ ಮಾತನಾಡಿ, ಸರಿಯಾದ ಆಹಾರ ಪದ್ಧತಿ ಕಣ್ಣಿನ ಬಗ್ಗೆ ತಿಳಿವಳಿಕೆ ಇದ್ದರೆ ಕುರುಡುತನ ಬರದಂತೆ ನೋಡಿಕೊಳ್ಳಬಹುದು ಎಂದರು.
ಜಿಲ್ಲಾ ಅಂಧತ್ವ ನಿವಾರಣಾಧಿಕಾರಿ ಡಾ.ಚಾಂದನಿ ದೇವಡಿ ಅವರ ಮಾರ್ಗದರ್ಶನದಲ್ಲಿ ‘ಎಲ್ಲರಿಗೂ ಕಣ್ಣಿನ ಆರೋಗ್ಯ’ ಕಾರ್ಯಕ್ರಮದಡಿ ಈ ಶಿಬಿರ ಆಯೋಜಿಸಲಾಯಿತು.
ಕಾರಾಗೃಹದ ಮುಖ್ಯ ವೈದ್ಯಾಧಿಕಾರಿ ಡಾ.ಮಹೇಶ ನಾಗರಬೆಟ್ಟ, ಜೈಲರುಗಳಾದ ವೈ.ಎಸ್.ನಾಯಕ, ಎಚ್.ಎನ್.ಅಭಿಷೇಕ, ಬಸವರಾಜ ಭಜಂತ್ರಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು. ಕಾರಾಗೃಹದ ಉಪಾದ್ಯಾಯ ಶಶಿಕಾಂತ ಯಾದಗುಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.