ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರ ಭಾಗದಲ್ಲಿರೋ ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆಗೆ ಹಾರಿ ಸಾವನ್ನಪ್ಪಿದ್ದಾಳೆ.
ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಹಾರಿದ್ದಾಳೆ. ರೇಣುಕಾ ಅಮೀನಪ್ಪ ಕೋನಿನ್ (26 ), ಯಲ್ಲವ್ವ (2) ಅಮೃತಾ (1) ಮೃತರಾದ ದುರ್ದೈಗಳು. ಕಳೆದ ಎರಡು ದಿನಗಳ ಹಿಂದೆ ಗಂಡನ ಮನೆಯಲ್ಲಿ ಜಗಳವಾಡಿ ಮನೆ ಬಿಟ್ಟು ಹೋಗಿದ್ದ ರೇಣುಕಾ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದಳು.
ಎರಡು ದಿನಗಳಿಂದ ಗಂಡನ ಮನೆಯವರು ರೇಣುಕಾ ಹಾಗೂ ಮಕ್ಕಳಿಗಾಗಿ ಹುಡುಕಾಡಿದ್ದರು. ಕೊನೆಗೆ ಕಾಣೆಯಾಗಿದ್ದರ ಕುರಿತು ನಿನ್ನೆ ಮನಗೂಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇಂದು ಕಾಲುವೆಯಲ್ಲಿ ರೇಣುಕಾ ಹಾಗೂ ಓರ್ವ ಹೆಣ್ಣು ಮಗುವಿನ ಶವ ಪತ್ತೆಯಾಗಿವೆ. ಮತ್ತೋರ್ವ ಹೆಣ್ಣು ಮಗುವಿನ ಶವಕ್ಕಾಗಿ ಸ್ಥಳಿಯರು ಹಾಗೂ ಪೊಲೀಸರಿಂದ ಶೋಧ ಕಾರ್ಯ ಮುಂದುವರೆದಿದೆ.