ಮೈಸೂರು: ಬಿಜೆಪಿಯವರ ಮೇಲೆ ಯಕೆ ಸಿಬಿಐ ರೊಟೀನ್ ದಾಳಿ ಮಾಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಡಿಕೆ ಬ್ರದರ್ಸ್ ಮೇಲೆ ಸಿಬಿಐ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ರಾಜಕೀಯ ದುರುದ್ದೇಶದಿಂದ ಮಾಡಿರುವ ದಾಳಿಯಾಗಿದೆ. ಬಿಜೆಪಿಯವರ ಮೇಲೆ ಯಾಕೆ ಸಿಬಿಐ ರೋಟಿನ್ ದಾಳಿ ಮಾಡೋಲ್ಲ. ಅಲ್ಲಿ ಇರುವ ಎಲ್ಲರು ಸತ್ಯ ಹರಿಶ್ಚಂದ್ರರಾ?, ಅವರ್ಯಾರು ಭ್ರಷ್ಟಾಚಾರ ಅಕ್ರಮ ಹಣ ಸಂಪಾದನೆಯನ್ನೇ ಮಾಡಿಲ್ವಾ ಎಂದು ಪ್ರಶ್ನಿಸಿದರು.
ಯಾಕೆ ಉಪಚುನಾವಣೆ ಸಂದರ್ಭದಲ್ಲಿಯೇ ದಾಳಿ ಮಾಡಬೇಕು. ಯಾಕೆ ಕಾಂಗ್ರೆಸ್ ನಾಯಕರನ್ನ ಟಾರ್ಗೆಟ್ ಮಾಡಬೇಕು. ಸುಮ್ಮನೆ ರಾಜಕೀಯ ಕಾರಣಕ್ಕಾಗಿ ದಾಳಿ ಮಾಡ್ತಿದ್ದಾರೆ. ಆದರೆ ಹೇಳೋದು ಮಾತ್ರ ವೇದಾಂತ ಎಂದು ಬಿಜೆಪಿ ವಿರುದ್ಧ ಸಿದ್ದು ಗುಡುಗಿದರು.
ಇದೇ ವೇಳೆ ಆರ್ ಆರ್ ನಗರಕ್ಕೆ ಡಿ.ಕೆ ರವಿ ಪತ್ನಿ ಕುಸುಮಾ ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಿದರು. ನಾವು ಹೈಕಮಾಂಡ್ ಗೆ ಕುಸುಮಾ ಹೆಸರು ಕಳುಹಿಸಿದ್ದೇವೆ. ಅವರೇ ಅಂತಿಮವಾಗಿ ಅಭ್ಯರ್ಥಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಇಂದು ಅಥವಾ ನಾಳೆ ಅಭ್ಯರ್ಥಿ ಹೆಸರು ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ತಿಳಿಸಿದರು.
ಕುಸುಮಾ ಸ್ಪರ್ಧೆಗೆ ಯಾರಾದರೂ ವಿರೋಧ ವ್ಯಕ್ತಪಡಿಸಲಿ. ನಮ್ಮ ಪಕ್ಷದ ಅಭ್ಯರ್ಥಿಗೆ ವೋಟು ಕೇಳೋದು ನಮ್ಮ ಕರ್ತವ್ಯ. ವಿರೋಧಪಡಿಸುವವರನ್ನು ನಾವು ಬೇಡ ಅನ್ನೋಕೆ ಆಗೋಲ್ಲ. ಆರ್ ಆರ್ ನಗರ ಹಾಗೂ ಶಿರಾ ಎರಡು ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ಬಿಜೆಪಿ ಪಕ್ಷದ ಆಂತರಿಕ ವಿಚಾರವನ್ನ ನಾನು ಮಾತನಾಡೋಲ್ಲ ಎಂದರು.