ಬೆಂಗಳೂರು: ಶೋಕಿ ಜೀವನಕ್ಕಾಗಿ ಖಾಸಗಿ ಕಂಪನಿಯಲ್ಲಿನ ಮ್ಯಾನೇ ಜರ್ ಹುದ್ದೆ ತೊರೆದು ಸರಗಳ್ಳತನಕ್ಕೆ ಇಳಿದಿದ್ದ ವ್ಯಕ್ತಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬನಶಂಕರಿ ನಿವಾಸಿ ತಮಿಳುನಾಡು ಮೂಲದ ಜಯಕುಮಾರ್ ಅಲಿಯಾಸ್ ಜಯ ಗಣಿ (42) ಬಂಧಿತ. ಆರೋಪಿ ಯಿಂದ 3.70 ಲಕ್ಷ ರೂ. ಮೌಲ್ಯದ 60 ಗ್ರಾಂ ಚಿನ್ನಾಭರಣ, 2 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಪೀಣ್ಯ ಪೊಲೀಸರು ತಿಳಿಸಿದ್ದಾರೆ.
ಆ.8ರ ರಾತ್ರಿ ನೆಲಗದರನಹಳ್ಳಿ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಿದ್ದಗಂಗಮ್ಮ ಕುತ್ತಿಗೆಯಿಂದ ಚಿನ್ನದಸರ ದೋಚಿ ಆಕೆಯನ್ನು ತಳ್ಳಿ ಪರಾರಿಯಾಗಿದ್ದ. ಈ ಕುರಿತು ಪ್ರಕರಣ ದಾಖಲಿಸಿ ಆರೋಪಿ ಪತ್ತೆಗಾಗಿ ತೀವ್ರ ಶೋಧ ನಡೆಸಲಾಗಿತ್ತು. ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಾಗ ಹಳೇ ಆರೋಪಿ ಜಯಕುಮಾರ್ ಎಂಬುದು ಗೊತ್ತಾಗಿತ್ತು.
ಕೃತ್ಯ ಬಳಿಕ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಜಯಕುಮಾರ್ 2012ರಲ್ಲಿ ನಗರದ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿದ್ದ. ಈ ವೇಳೆ ಪಬ್, ಬಾರ್ಗಳಿಗೆ ಹೋಗಿ ಪಾರ್ಟಿ ಮಾಡುತ್ತಿದ್ದ. ಮದ್ಯಸೇವನೆ ಹಾಗೂ ಜೂಜಾಟಕ್ಕೆ ದಾಸನಾಗಿದ್ದ. ಕೆಲಸ ಬಿಟ್ಟು ಕಾರ್ತಿಕ್ ಮತ್ತು ಅರುಣ್ ಎಂಬುವರ ಜತೆಗೂಡಿ ಸರಗಳ್ಳತನ ಮಾಡುತ್ತಿದ್ದ. ಆರೋಪಿ ವಿರುದ್ಧ ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ 22 ಹಾಗೂ ತಮಿಳುನಾಡಿನಲ್ಲಿ 12 ಸರಗಳ್ಳತನ ಪ್ರಕರಣಗಳಿವೆ.