ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ನೇತೃತ್ವದಲ್ಲಿ ಜಿಲ್ಲೆಯ ಜನರ ಸಮಸ್ಯೆ ಆಲಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳ ಎರಡನೇ ಹಾಗೂ ಕೊನೆಯ ಶನಿವಾರದಂದು ನಡೆಸುತ್ತಿರುವ ಫೋನ್ ಇನ್ ಮೂರನೇ ಕಾರ್ಯಕ್ರಮದಲ್ಲಿಯೂ ಜನರು ಸಮಸ್ಯೆ ಹೇಳಿಕೊಂಡರು. ಇದಕ್ಕೆ ಎಸ್ಪಿ ಸ್ಪಂದನೆ ಮಾಡಿದ್ದಕ್ಕೆ ಜನರು ಕೃತಜ್ಞತೆ ತಿಳಿಸಿದರು.
ನಮಸ್ಕಾರ್ ರೀ. ನಾನ ಎಸ್ಪಿ ಮಾತಾಡಾತ್ತೇನಿ ಹೇಳ್ರಿ.. ಎಂದು ಮಾತನಾಡುತ್ತಲೇ ಬೆಳಗ್ಗೆ ಸರಿಯಾಗಿ 11 ಗಂಟೆಗೆ ಫೋನ್ ಇನ್ ಕಾರ್ಯಕ್ರಮ ಪ್ರಾರಂಭಿಸಿದ ಎಸ್ಪಿ ಡಾ. ಸಂಜೀವ ಪಾಟೀಲ್ ಅವರು, ಸವದತ್ತಿ ಹಾಗೂ ಬೈಲಹೊಂಗಲ ತಾಲೂಕಿನಲ್ಲಿ ಗ್ಯಾರೇಜ್ ಹಾಗೂ ಹೋಟೆಲ್ ನಲ್ಲಿ ಹಾಗೂ ಶಾಲೆಯ ಆವರಣದ ಕೂಗಳತೆಯ ದೂರದ ಮನೆಯಲ್ಲಿ ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಅಕ್ರಮ ಸರಾಯಿ ಮಾರಾಟದಲ್ಲಿ ಮಹಿಳೆಯೊಬ್ಬಳು ಬೈಲಹೊಂಗಲ ತಾಲೂಕಿನಲ್ಲಿ ಅವ್ಯಾಹತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಕರೆ ಮಾಡಿ ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಡಾ. ಸಂಜೀವ ಪಾಟೀಲ ಅವರು ಸಂಬಂಧಿಸಿದ ಪೊಲೀಸ್ ಠಾಣೆಗೆ ತಿಳಿಸಿ ದಾಳಿ ನಡೆಸಲಾಗುವುದು ಎಂದರು.
ನಿಪ್ಪಾಣಿಯಲ್ಲಿ ಮಹಾರಾಷ್ಟ್ರದ ಗಡಿ ಭಾಗವಾಗಿರುವುದರಿಂದ ಗಾಂಜಾ ಮಾರಾಟ, ಮಟ್ಕಾ ಬುಕ್ಕಿಂಗ್ ವ್ಯಾಪಕವಾಗಿ ನಡೆಯುತ್ತಿವೆ. ಮಹಾರಾಷ್ಟ್ರದಿಂದ ಗಾಂಜಾ ತಂದು ನಿಪ್ಪಾಣಿಯ ಸ್ಥಳೀಯ ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಡಾ. ಸಂಜೀವ ಪಾಟೀಲ ಅವರು, ಎಲ್ಲಿಂದ ಹೇಗೆ, ಯಾರು ತಂದು ಮಾರಾಟ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಪಡೆದು ಗಾಂಜಾ ಹಾಗೂ ಮಟ್ಕಾ ಬುಕ್ಕಿಗಳಿಗೆ ತಕ್ಕ ಪಾಠ ಕಲಿಸುವುದಾಗಿ ಹೇಳಿದರು.
ಬೆಳಗಾವಿ ನಗರಕ್ಕೆ ಸಂಬಂಧಿಸಿದಂತೆ ಆರು ಜನ ಫೋನ್ ಮಾಡಿ ಸಮಸ್ಯೆ ತೋಡಿಕೊಂಡರು. ಇದಕ್ಕೆ ಎಸ್ಪಿ ಡಾ. ಸಂಜೀವ ಪಾಟೀಲ ಅವರು ನಗರ ಪೊಲೀಸ್ ಇಲಾಖೆಯವರಿಗೆ ತಿಳಿಸಿ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದರು.