ಇತ್ತೀಚೆಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದ ಮತ್ತೆ ಬುಗಿಲೆದ್ದಿತ್ತು. ಬೆಳಗಾವಿ ಬಗ್ಗೆ ಮಹಾರಾಷ್ಟ್ರ ತಗಾದೆ ತೆಗೆದಿತ್ತು. ಈ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದರು.
ಬೆಳಗಾವಿ ಬಗ್ಗೆ ಮತ್ತೆ ತಗಾದೆ ತೆಗೆದಿದ್ದಕ್ಕೆ ಬೆಳಗಾವಿಯಲ್ಲಿ ಪ್ರತಿಭಟನೆಗಳನ್ನು ಮಾಡಿದ್ದರು.
ಮಹಾರಾಷ್ಟ್ರದ ವಾಹನಗಳಿಗೆ ಮಸಿ ಬಳಿದು, ವಾಹನದ ಗಾಜುಗಳನ್ನು ಒಡೆದು ಹಾಕಿದ್ದರು. ಹೀಗಾಗಿ ಒಂದೆರಡು ದಿನ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ಆಗಾಗ ಸಾಮಾನ್ಯ ಜನರ ನಿದ್ದೆಯನ್ನು ಕೆಡಿಸುತ್ತಿರುವ ಬೆಳಗಾವಿ ವಿವಾದದ ಬಗ್ಗೆ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಯಾರದ್ದೋ ಬೇಳೆ ಬೇಯಿಸಿಕೊಳ್ಳಬೇಕು ಅಂತ ಸಾಮಾನ್ಯ ಜನರ ಜೀವನವನ್ನು ಹಾಳು ಮಾಡಬಾರದು ಅಂತ ಶಿವಣ್ಣ ರಿಯಾಕ್ಷನ್ ಕೊಟ್ಟಿದ್ದಾರೆ. ಅದರ ಸಾರಾಂಶ ಹೀಗಿದೆ.
‘ರಾಜಕೀಯ-ಪೊಲೀಸ್ ಒಟ್ಟಾಗಿ ಕೆಲಸ ಮಾಡ್ಬೇಕು’
“ಸ್ಥಾನ- ಮಾನ ಜಲ ಭಾಷೆ ಅಂತ ಬಂದ್ರೆ ಕಂಡಿತಾ ನಾವು ಸಪೋರ್ಟ್ ಮಾಡಲೇಬೇಕಾಗುತ್ತೆ ಅದು ನಮ್ಮ ಕರ್ತವ್ಯ ಅಷ್ಟೇ. ಇನ್ನೂ ನನ್ನನ್ನು ಭೇಟಿ ಮಾಡಿಲ್ಲ. ಆದರೆ ನಮ್ಮ ಸಪೋರ್ಟ ಇದ್ದೇ ಇರುತ್ತೆ. ಅಲ್ಲಿ ಹೋದರೆನೇ ಸಪೋರ್ಟ್ ಇರುತ್ತೆ ಅಂತಲ್ಲ. ಅದನ್ನು ಹೆಂಗೆ ತಲುಪಿಸಬೇಕು. ಯಾರಿಗೆ ತಲುಪಿಸಬೇಕು ಹಂಗೆ ತಲುಪಿಸಬೇಕು. ನಮ್ಮ ಕೈಯಲ್ಲಿ ಸಿಸ್ಟಂ ಇದ್ದರೆ ಬೇರೆ. ನಮ್ಮಲ್ಲೇ ವ್ಯವಸ್ಥೆಗಳು ಇವೆ. ರಾಜಕೀಯ ವ್ಯವಸ್ಥೆ ಇದೆ. ಹಾಗೇ ಪೊಲೀಸ್ ವ್ಯವಸ್ಥೆಯಿದೆ. ಆ ಎರಡೂ ವ್ಯವಸ್ಥೆ ಒಂದಾಗಿ ಕೆಲಸ ಮಾಡಿದ್ರೆ ಏನೂ ಸಮಸ್ಯೆಯಿರಲ್ಲ. ಅದನ್ನು ಅವರು ಮನಸ್ಸು ಮಾಡಬೇಕು ಅಷ್ಟೇ.”
‘ಒಬ್ಬರ ಸ್ವಾರ್ಥಕ್ಕೆ ಜನರ ಬದುಕು ಹಾಳಾಗಬಾರದು’
“ಯಾರದ್ದೋ ಬೇಳೆ ಬೇಯಿಸಿಕೊಳ್ಳಬೇಕು ಅಂತ ಸಾಮಾನ್ಯ ಜನರ ಜೀವನವನ್ನು ಹಾಳು ಮಾಡಬಾರದು. ಅದು ತಪ್ಪು. ನಿಮ್ಮ ಒಬ್ಬರ ಸ್ವಾರ್ಥ ನೋಡಿ ಜನರ ಬದುಕು ಹಾಳು ಮಾಡಬಾರದು. ಅದು ಮರಾಠರೇ ಆಗಿರಬಹುದು. ಇಲ್ಲ ಕರ್ನಾಟಕದವರೇ ಆಗಿರಬಹುದು. ಮರಾಠರು ಹಾಗೂ ಕನ್ನಡಿಗರು ಇಬ್ಬರು ಅಣ್ಣ ತಮ್ಮಂದಿರ ಹಾಗೆ ಬದುಕಬೇಕು. ನಾವೆಷ್ಟು ಜನ ಇದ್ದೀವಿ ಅನ್ನೋದು ಮುಖ್ಯ ಅಲ್ಲ. ನಾವು ಎಲ್ಲಿ ಬಾಳುತ್ತಿದ್ದೇವೆ ಅನ್ನೋದು ಮುಖ್ಯ. ಎಲ್ಲೇ ಇದ್ದರೂ ಇಂಡಿಯಾನೇ ತಾನೇ. ನಿಮ್ಮ ಸ್ವಾರ್ಥಕ್ಕೆ ಜನರ ಜೀವನ ಹಾಳು ಮಾಡಬೇಡಿ”
‘ನಾನು ಹೋಗುವಾಗ ಯಾರಾದ್ರೂ ಕಲ್ಲಲ್ಲಿ ಹೊಡೆಯಬಹುದು’
“ನಾನು ಸಾಮಾನ್ಯ ಜನರೇ ತಾನೇ. ಏನೋ ಸ್ಟಾರ್‌ಡಮ್ ಇದೆ ಅಷ್ಟೇ. ನಾನು ಹೋಗುವಾಗ ಯಾರಾದ್ರೂ ಕಲ್ಲಲ್ಲಿ ಹೊಡೆಯಬಹುದು. ಯಾರಿಗೆ ಗೊತ್ತು. ನಮಗೆ ಪೊಲೀಸ್ ಪ್ರೊಡೆಕ್ಷನ್ ಕೊಡುತ್ತಾರೆ ಹೋಗಿಬಿಡುತ್ತೇವೆ. ಸಾಮಾನ್ಯ ಜನರಿಗೆ ಹಾಗೇ ಆಗೋದಿಲ್ಲವಲ್ಲ. ಅವರು ಕಲ್ಲು ಹೊಡೆಸಿಕೊಳ್ಳುತ್ತಾರೆ ತಾನೇ. ಹಾಗಾಗಬಾರದು ನೀವೇ ಸರಿ ಮಾಡಿಕೊಂಡರೆ ಅಲ್ಲಿವರೆಗೂ ಹೋಗೋದೇ ಬೇಡ. ಬೆಳಗಾವಿಗೆ ಭಾಗಕ್ಕೆ ಸಂಬಂಧ ಪಟ್ಟವರು ಯಾರು ಇದ್ದಾರೋ ಅವರು ಸ್ವಲ್ಪ ಬುದ್ದಿ ಉಪಯೋಗಿಸಿ, ದಯವಿಟ್ಟು ಮಾತಾಡಿ.” ಎಂದು ಶಿವಣ್ಣ ಹೇಳಿದ್ದಾರೆ.
‘ಆಯಾ ರಾಜ್ಯಕ್ಕೆ ಮರ್ಯಾದೆ ಕೊಡಬೇಕು’
“ನಾನು ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಚೆನ್ನೈನಲ್ಲಿ. ಅಲ್ಲಿ ನಾನು ಓದಿವಾಗ ಅಲ್ಲಿ ಭಾಷೆಯನ್ನು ಓದಬೇಕಿತ್ತು. ಇಲ್ಲಾ ನಾನು ಓದುವುದಿಲ್ಲ ಅಂದ್ರೆ ಆಗುತ್ತಾ? ಇಲ್ಲಿ ಕಡ್ಡಾಯ ಅಂತ ಹೇಳಿದ ಮೇಲೆ ಓದಲೇ ಬೇಕಲ್ವಾ? ನಾವು ಪ್ರತಿಯೊಂದು ಭಾಷೆಯನ್ನೂ, ಪ್ರತಿಯೊಂದು ರಾಜ್ಯವನ್ನೂ ಗೌರವಿಸಲೇಬೇಕು. ಯಾವ ರಾಜ್ಯದಿಂದ ನಾವು ಏನನ್ನು ಪಡೆಯುತ್ತೆವೆಯೋ ಅದಕ್ಕೆ ನಾನು ಮರ್ಯಾದೆ ಕೊಡಬೇಕು. ಅದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ ಆಗುತ್ತೆ.” ಎಂದು ಶಿವಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.