ಚಿತ್ರದುರ್ಗ: ಮುರುಘಾ ಮಠಕ್ಕೆ ನೂತನ ಪೀಠಾಧ್ಯಕ್ಷ ಅಥವಾ ಆಡಳಿತಾಧಿಕಾರಿ ನೇಮಕ ಮಾಡುವಲ್ಲಿ ಸರ್ಕಾರ ವಿಳಂಬ ನೀತಿ ಮುಂದುವರಿಸಿದರೆ ನ್ಯಾಯಾಲಯದ ಮೆಟ್ಟಿಲೇರಲು ವೀರಶೈವ ಲಿಂಗಾಯತ ಸಮಾಜದ ಸಭೆ ಶನಿವಾರ ಒಮ್ಮತದ ನಿರ್ಣಯ ಕೈಗೊಂಡಿತು.
ತಾಲ್ಲೂಕಿನ ಸೀಬಾರದಲ್ಲಿರುವ ಎಸ್.
ನಿಜಲಿಂಗಪ್ಪ ಸ್ಮಾರಕದಲ್ಲಿಮಾಜಿ ಸಚಿವ ಎಚ್. ಏಕಾಂತಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಮೂರು ನಿರ್ಣಯಗಳನ್ನು ಅನುಮೋದಿಸಿತು. ಸಭೆಯ ತೀರ್ಮಾನದ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆಯಲು ನಿರ್ಧರಿಸಲಾಯಿತು.
‘ಶಿವಮೂರ್ತಿ ಶರಣರ ಬಂಧನದ ಬಳಿಕ ಮುರುಘಾ ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದಲ್ಲಿರುವ ವಿಷಮ ಸ್ಥಿತಿಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ನೂತನ ಪೀಠಾಧ್ಯಕ್ಷರು ಅಥವಾ ಆಡಳಿತಾಧಿಕಾರಿ ನೇಮಕ ಮಾಡುವಂತೆ ಅಕ್ಟೋಬರ್ 14ರಂದು ಕೋರಲಾಗಿತ್ತು. ಸರ್ಕಾರ ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಒಂದು ವಾರ ಕಾದುನೋಡಿ ಮುಂದಿನ ಹೆಜ್ಜೆ ಇಡಲಾಗುವುದು’ ಎಂದು ಏಕಾಂತಯ್ಯ ಮಾಹಿತಿ ನೀಡಿದರು.
‘ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳದಿದ್ದರೆ ಅಥವಾ ನಕಾರಾತ್ಮಕ ನಿರ್ಧಾರ ಪ್ರಕಟಿಸಿದರೆ ಕಾನೂನು ಹೋರಾಟಕ್ಕೆ ಸಮುದಾಯ ಸಿದ್ಧವಿದೆ. ಇದಕ್ಕೆ ಸಮಿತಿಯೊಂದನ್ನು ರಚಿಸಲು ಹಾಗೂ ತೀರ್ಮಾನ ಕೈಗೊಳ್ಳುವ ಸಂಪೂರ್ಣ ಅಧಿಕಾರವನ್ನುಅದಕ್ಕೆ ನೀಡಲು ನಿರ್ಧರಿಸಲಾಗಿದೆ. ಮುರುಘಾ ಮಠದ ಪೀಠಾಧ್ಯಕ್ಷ ಸ್ಥಾನ ಒಂದು ವೇಳೆ ತೆರವಾದರೆ ಮಠದ ಪರಂಪರೆ ಮತ್ತು ಸಂಪ್ರದಾಯದ ಪ್ರಕಾರ ನೂತನ ಪೀಠಾಧ್ಯಕ್ಷರನ್ನು ನೇಮಕ ಮಾಡಲು ಮತ್ತೊಂದು ಸಮಿತಿ ರಚಿಸಲಾಗುವುದು’ ಎಂದು ವಿವರಿಸಿದರು.
Laxmi News 24×7