ನವದೆಹಲಿ,ಜು.7- ನಾಗಾಲ್ಯಾಂಡ್‍ನಲ್ಲಿ ನಾಯಿ ಮತ್ತು ಅದರ ಮಾಂಸ ಮಾರಾಟವನ್ನು ನಿಷೇಧಿಸಿರುವುದರ ಬಗ್ಗೆ ಕುಪಿತಗೊಂಡಿರುವ ಸ್ಥಳೀಯರು, ಏಕಾಏಕಿ ನಾಯಿ ಮಾಂಸದೂಟವನ್ನು ನಿಷೇಧಿಸುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಗಾಲ್ಯಾಂಡ್ ಅಲ್ಲದೆ ದೇಶದ ಹಲವೆಡೆ ನಾಯಿ ಮಾಂಸವನ್ನು ಹೆಚ್ಚು ಮಾರಾಟ ಮಾಡಲಾಗುತ್ತದೆ. ಮಣಿಪುರ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಕೆಲವು ಗುಡ್ಡಗಾಡು ಪ್ರದೇಶಗಳಲ್ಲಿ ನಾಯಿ ಮಾಂಸವನ್ನು ತಿನ್ನಲಾಗುತ್ತದೆ.
ಇಡೀ ಈಶಾನ್ಯ ಪ್ರದೇಶಗಳಲ್ಲಿ ನಾಯಿಗಳ ಕಳ್ಳಸಾಗಣೆಯ ದಂಧೆಯೇ ನಡೆಯುತ್ತಿದೆ. ನಾಗಾಲ್ಯಾಂಡ್ ಮತ್ತು ಅಸ್ಸಾಂನ ಗಡಿಯಲ್ಲಿರುವ ದಿಮಾಪುರ ನಾಯಿ ಮಾಂಸಕ್ಕಾಗಿ ಅತಿದೊಡ್ಡ ಮಾರುಕಟ್ಟೆಯೇ ಇದೆ.
ಶ್ವಾನಗಳನ್ನು ಕೊಂದು ತಿನ್ನುವುದು ಅಮಾನವೀಯ. ನಾಯಿಗಳ ಮೇಲಾಗುವ ಕ್ರೌರ್ಯಕ್ಕೆ ಧ್ವನಿ ಎತ್ತುತ್ತಿದ್ದೇವೆ ಎಂದು ಹಲವು ಪ್ರಾಣಿ ದಯಾ ಸಂಘಗಳು ಇದೇ ಸಂದರ್ಭದಲ್ಲಿ ತಿಳಿಸಿವೆ. ನಾಯಿಗಳನ್ನು ದೇಶದ ವಿವಿಧ ಪ್ರದೇಶಗಳಿಂದ ಕಳ್ಳಸಾಗಣೆ ಮಾಡಲಾಗುತ್ತದೆ. ಕದ್ದ ನಾಯಿಗಳನ್ನು ದಿಮಾಪುರಕ್ಕೆ ತಂದೊಯ್ದು ಕೊಂದು ಇಲ್ಲಿಂದಲೇ ನಾಯಿಮಾಂಸ ಮಾರುಕಟ್ಟೆಗೆ ಬರುತ್ತದೆ.
ನಾಯಿಮಾಂಸವನ್ನು ದಿಮಾಪುರ ಮಾರುಕಟ್ಟೆಗೆ ಕರೆತರುವ ಕೆಲಸವನ್ನು ಅನೇಕ ಸಣ್ಣ ಗ್ಯಾಂಗ್‍ಗಳಿಗೆ ವಹಿಸಲಾಗಿದೆ ಎಂದು ತಿಳಿದುಬಂದಿದೆ. ನಾಯಿ ಹಿಡಿಯಲು 50 ರಿಂದ 150 ರೂ. ನೀಡಲಾಗುತ್ತದೆ. ದಿಮಾಪುರ ಮಾರುಕಟ್ಟೆಯಲ್ಲಿ ನಾಯಿಗಳನ್ನು ಒಂದು ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತದೆ. ಹೆಚ್ಚಾಗಿ ನಾಯಿ ಮಾಂಸ ಹಬ್ಬಗಳಲ್ಲಿ ಮಾರಾಟ ಮಾಡಲಾಗುತ್ತದೆ.