ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗಾಗಿ ಅಭ್ಯರ್ಥಿಗಳನ್ನು ಘೋಷಿಸುವ ಹಕ್ಕು ಕೆಪಿಸಿಸಿ ಅಧ್ಯಕ್ಷನಾದ ನನಗೂ ಇಲ್ಲ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಭಾನುವಾರವಷ್ಟೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೊಪ್ಪಳ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದ್ದರು.
ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಡಿಕೆಶಿ, ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತ್ರ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಹಕ್ಕಿದೆ. ಇದು ನಮಗಿಲ್ಲ ಎಂದು ಹೇಳಿದರು.
ಯಾವ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಅಲ್ಲಿರುವವರಿಗೆ ಉತ್ತೇಜನ ನೀಡಲು ಹೇಳಿರಬಹುದು. ಆದರೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ, ಹೈಕಮಾಂಡ್‌ಗೆ ಮಾತ್ರ ಅಭ್ಯರ್ಥಿ ತೀರ್ಮಾನಿಸುವ ಅಧಿಕಾರ ಇದೆ ಎಂದು ಪುನರುಚ್ಚರಿಸಿದರು.