Breaking News

ಕಲಾವಿದರಿಂದ ರಚನೆಗೊಂಡ ನಾಡದೇವತೆಯ ಚಿತ್ರ

Spread the love

ಬೆಂಗಳೂರು: ಕರ್ನಾಟಕ ರಾಜ್ಯದ ನಾಡದೇವತೆಯ ಒಂದು ನಿರ್ದಿಷ್ಟವಾದ ಚಿತ್ರವನ್ನು ಆಯ್ಕೆ ಮಾಡಲು ರಚಿಸಲಾಗಿದ್ದ ಚಿತ್ರ ಕಲಾವಿದರನ್ನು ಒಳಗೊಂಡ ಸಮಿತಿಯು ನಿಯೋಜಿತ ಕಲಾವಿದರಿಂದ ರಚನೆಗೊಂಡ ನಾಡದೇವತೆಯ ಚಿತ್ರವನ್ನು ಸ್ವೀಕರಿಸಿದೆ.

ಹಲವಾರು ಕಾರ್ಯಕ್ರಮಗಳಲ್ಲಿ ಕರ್ನಾಟಕ ರಾಜ್ಯದ ನಾಡದೇವತೆಯ ಭಾವಚಿತ್ರವಾಗಿ ದುರ್ಗಾದೇವಿ, ಸರಸ್ವತಿ ಇತ್ಯಾದಿ ದೇವತೆಗಳ ಚಿತ್ರಗಳನ್ನು ಬಳಸಲಾಗುತ್ತಿದ್ದು, ಒಂದು ನಿರ್ದಿಷ್ಟ ಚಿತ್ರಕೃತಿಯ ಕೊರತೆಯಿರುವುದನ್ನು ಮನಗಂಡ ಸರ್ಕಾರವು ಚಿತ್ರವನ್ನು ಆಯ್ಕೆ ಮಾಡಲು ಹಿಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ಚಿತ್ರ ಕಲಾವಿದರನ್ನು ಒಳಗೊಂಡ ಸಮಿತಿಯನ್ನು ರಚಿಸಿತ್ತು.

 

ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷರಾದ ಡಿ.ಮಹೇಂದ್ರ ಅವರ ಅಧ್ಯಕ್ಷತೆಯ ಐದು ಜನರ ಈ ಸಮಿತಿಯು, ಕರ್ನಾಟಕ ರಾಜ್ಯದ ನಾಡದೇವತೆಯ ಅಧಿಕೃತ ಚಿತ್ರದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಕಲೆಯನ್ನು ಬಿಂಬಿಸುವ ಹಾಗೂ ನಾಡಗೀತೆಯಲ್ಲಿರುವ ಕೆಲವು ಅಂಶಗಳನ್ನು ಸಾಂಕೇತಿಕವಾಗಿ ಬಳಸಿಕೊಂಡು ಚಿತ್ರ ರಚಿಸುವಂತೆ ಕಲಾವಿದರಾದ ಸೋಮಶೇಖರ್.ಕೆ ಅವರಿಗೆ ಕೇಳಿತ್ತು. ಇದೀಗ ಅವರು ಸಮಿತಿ ಸೂಚನೆಯಂತೆ ಚಿತ್ರ ಸಿದ್ಧಪಡಿಸಿ ಸಲ್ಲಿಸಿದ್ದು, ಆ ಚಿತ್ರ ಎಲ್ಲೆಡೆ ಹರಿದಾಡುತ್ತಿದೆ.

ಭಾವಚಿತ್ರದಲ್ಲಿ ಏನೆಲ್ಲ ಅಂಶಗಳಿವೆ?:
೧. ನಾಡದೇವತೆಯ ಹಿನ್ನೆಲೆಯಲ್ಲಿ ಕರ್ನಾಟಕದ ನಕ್ಷೆ ಇರುತ್ತದೆ.
೨. ಮುಖದಲ್ಲಿ ಸ್ವಾಭಾವಿಕ ಸೌಂದರ್ಯ ಮತ್ತು ದೈವಿ ಭಾವ ಕಂಗೊಳಿಸಿದೆ.
೩. ದ್ವಿಭುಜ ಅಂದರೆ ಎರಡು ಕೈಗಳು ವಾಸ್ತವಿಕತೆಗೆ ಹತ್ತಿರವಾಗಿದೆ.
೪. ಬಲಗೈಯಲ್ಲಿ ಅಭಯ ಮುದ್ರೆ ಸಾಂಕೇತಿಕವಾಗಿ ರಕ್ಷಣೆ ನೀಡುತ್ತಿದ್ದರೆ, ಎಡಗೈಯಲ್ಲಿರುವ ತಾಳೆಗರಿ ಕನ್ನಡ ಭಾಷಾ ಸಂಪತ್ತು, ಜ್ಞಾನ ಸಮೃದ್ಧಿಯನ್ನು ಪ್ರವಹಿಸುವ ನಿಟ್ಟನ್ನು ಸೂಚಿಸುತ್ತಿದೆ.
೫. ನಾಡದೇವತೆಯು ಕುಳಿತಿರುವ ಭಂಗಿಯು ಭವ್ಯತೆಯನ್ನು ಹಾಗೂ ಸಾಕ್ಷ್ಯತೆಯನ್ನು ಪ್ರತಿಬಿಂಬಿಸುತ್ತಿದೆ.
೬. ಕರ್ನಾಟಕದ ಧ್ವಜ ಕನ್ನಡಾಭಿಮಾನದ ಸಂಕೇತವಾಗಿ ರಾರಾಜಿಸುತ್ತಿದೆ.
೭. ಹಸಿರು ಸೀರೆಯು ಸಿರಿ ಸಂಪದ ಸಮೃದ್ಧಿಯನ್ನು ಸೂಚಿಸುತ್ತಿದೆ.
೮. ಕರ್ನಾಟಕದ ಭವ್ಯ ವೈಶಿಷ್ಟ್ಯವನ್ನು ಸಾರುವ ಆಭರಣಗಳು ನಮ್ಮ ನಾಡನ್ನು ಆಳಿದ ಸಾಮ್ರಾಜ್ಯಗಳ ವೈಭವವನ್ನು ಸಾರುತ್ತಿವೆ.
೯. ಚಾಲುಕ್ಯರ ಕಾಲದ ಕರಂಡ ಮುಕುಟೋಪಾದಿಯಲ್ಲಿ ಕಿರೀಟ, ಕಿವಿಯಲ್ಲಿ ಸುಂದರ-ಕೌಶಲ್ಯ ಕರ್ಣಪರ್ಯಗಳು, ಭುಜದ ಮೇಲೆ ಕರ್ನಾಟಕ ವೈಶಿಷ್ಟ್ಯದ ಸಿಂಹ ಲಾಂಛನ ಭುಜಕೀರ್ತಿಗಳು, ಕುತ್ತಿಗೆಯಲ್ಲಿ ಕಂಠಿ, ಕಟ್ಟಾಣಿ, ಹಾರಗಳು,ಕರ್ನಾಟಕ ಲಾಂಛನ – ಗಂಡ ಭೇರುಂಡ ಪದಕ, ಕಟಿಯ ಆಭರಣವಾದ ಬೆಳ್ಳಿಯ ಡಾಬು, ಕಟಿಯಲ್ಲಿ ಕೀರ್ತಿಮುಖ ಲಾಂಛನದ ವಡ್ಯಾಣ, ಉದ್ದನೆಯ ವೈಜಯಂತಿ ಹಾರ, ನಡುವೆ ಹೊಯ್ಸಳ ಲಾಂಛನದ ಪದಕ ನಾಡದೇವತೆಯನ್ನು ಅಲಂಕರಿಸಿದೆ. ಕಾಲಿನಲ್ಲಿ ಕಡಗ, ಋಳಿ ಮತ್ತು ಕಾಲುಂಗುರಗಳು, ಹಣೆಯ ಲಲಾಟ ತಿಲಕ, ಶಿರದಲ್ಲಿ ಮುಡಿದಿರುವ ಹೂವು ಸೌಭಾಗ್ಯದ್ಯೋತಕಗಳಾಗಿವೆ. ತೆಳುವಾದ-ಮೃದುವಾದ ಹೂವಿನ ತೋಮಾಲೆಯು ನಾಡದೇವತೆಯ ಸಂಪೂರ್ಣ ಅಲಂಕಾರಕ್ಕೆ ಒಂದು ರೀತಿಯ ಮೆರುಗು ನೀಡಿದೆ. ಕೆಳಗೆ ಸುಂದರ ಸದೃಢ ತಾವರೆ ಹೂವು(ಕಮಲ) ದೇವಿಯ ಮೃದುವಾದ ಕಾಲುಗಳಿಗೆ ಆಸರೆ ನೀಡಿದೆ.
೧೦. ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟ, ಸಸ್ಯಕಾಶಿಯು ಸೊಬಗನ್ನು ಹೆಚ್ಚಿಸಿವೆ.


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ