ಬೆಂಗಳೂರು: ಚುನಾವಣಾ ಆಯೋಗದ ನಿಯಮಾವಳಿಯನ್ನು ಗಾಳಿಗೆ ತೂರಿ ಕಾಂಗ್ರೆಸ್ ಸರ್ಕಾರ ಚಿಲುಮೆ ಸಂಸ್ಥೆಗೆ ಆದೇಶವನ್ನು ನೀಡಿದ್ದು, ತನಿಖೆಯ ಮೂಲಕ ಎಲ್ಲ ಸತ್ಯಗಳು ಹೊರಬರಲಿದೆ. ಕಾಂಗ್ರೆಸ್ ಅವರ ಆರೋಪ ನಿರಾಧಾರ. ಈ ಪ್ರಕರಣ ಅವರಿಗೇ ತಿರುಗುಬಾಣವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು
ಸಿದ್ದರಾಮಯ್ಯ ಅವರ ಸರ್ಕಾರ 2013 ರಿಂದಲೂ ತನಿಖೆಯಾಗಬೇಕು ಎಂದು ಸೂಚನೆ ನೀಡಲಾಗಿದೆ. 2013 ರಿಂದ ಯಾವ ಆದೇಶಗಳನ್ನು ನೀಡಿದ್ದಾರೆ ಎಂಬ ಎಲ್ಲ ಸ್ಪಷ್ಟವಾದ ಸತ್ಯಗಳು ಹೊರಗೆ ಬರಲಿ ಎಂಬ ಉದ್ದೇಶದಿಂದ ತನಿಖೆಗೆ ಆದೇಶ ನೀಡಲಾಗಿದೆ. ಯಾವ ಉದ್ದೇಶದಿಂದ ಚಿಲುಮೆ ಸಂಸ್ಥೆಗೆ ಆದೇಶ ನೀಡಿರುವ ಸತ್ಯಾಸತ್ಯತೆ ಜನರಿಗೆ ಗೊತ್ತಾಗಬೇಕು. ನಮ್ಮ ಸರ್ಕಾರದ ಆದೇಶದಲ್ಲಿ ಮತದಾನದ ಜಾಗೃತಿ ಮೂಡಿಸುವ ಕಾರ್ಯಕ್ಕೆ ಆದೇಶ ನೀಡಲಾಗಿದ್ದು, ಚಿಲುಮೆ ಸಂಸ್ಥೆಗೆ ಯಾವುದೇ ರಾಜಕೀಯ ಪಕ್ಷದ ಜೊತೆ ಸಂಬಂಧವಿರಬಾರದು ಎಂಬ ಷರತ್ತನ್ನು ವಿಧಿಸಲಾಗಿದೆ. ಆದರೆ ಸಿದ್ದರಾಮಯ್ಯ ಅವರು ನೀಡಿರುವ ಆದೇಶದಲ್ಲಿ ಚುನಾವಣಾ ಆಯೋಗ ನಿರ್ವಹಿಸಬೇಕು ಮತ ಪರಿಷ್ಕರಣೆಯ ಕಾರ್ಯವನ್ನೇ ಸಂಸ್ಥೆಗೆ ನೀಡಿದ್ದಾರೆ. ಚುನಾವಣಾ ಆಯೋಗ ನಿರ್ವಹಿಸಬೇಕಾದ ಕಾರ್ಯವನ್ನು ಖಾಸಗಿ ಸಂಸ್ಥೆಗೆ ವಹಿಸಿರುವುದು ಅಕ್ಷಮ್ಯ ಅಪರಾಧ. ಅವರ ಅವಧಿಯಲ್ಲಿ ತಹಶೀಲ್ದಾರ ರವರಿಗೆ ಬಿಎಲ್ ಓಗಳ ನೇಮಕ ಮಾಡುವ ಆದೇಶವನ್ನೂ ನೀಡಿದ್ದಾರೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಹದ್ದುಮೀರಿ ಅಧಿಕಾರದ ದುರುಪಯೋಗ ಮಾಡಲಾಗಿದೆ ಎಂದರು.
ಮತದಾರರ ಪರಿಷ್ಕರಣೆಯ ಕಾರ್ಯದಲ್ಲಿ ಮತದಾರರ ಹೆಸರನ್ನು ಸೇರಿಸುವುದು ಹಾಗೂ ಕೈಬಿಡುವುದು ಚುನಾವಣಾ ಆಯೋಗದ ಕೆಲಸವೇ ಹೊರತು ಸರ್ಕಾರದ್ದಲ್ಲ. ನಮ್ಮ ಸರ್ಕಾರದ ಮೇಲೆ ರಾಜಕೀಯ ಪ್ರೇರಿತವಾಗಿ ಆರೋಪ ಹೊರಿಸಲಾಗುತ್ತಿದೆ ಎಂದರು.