ದುಬೈನಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ 18ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನೀಡಿದ್ದ 179 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಪಂಜಾಬ್ ತಂಡದ ಬೌಲರ್ ಗಳನ್ನು ಧೂಳೀಪಟ ಮಾಡಿತು. ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿದ್ದ ಫಾಫ್ ಡು’ಪ್ಲೆಸಿಸ್ ಹಾಗೂ ಶೇನ್ ವ್ಯಾಟ್ಸನ್ ಭರ್ಜರಿ ಜೊತೆಯಾಟವಾಡುವ ಮೂಲಕ ಬೌಲರ್ ಗಳ ಬೆವರಿಳಿಸಿದರು.
ಫಾಫ್ ಡು’ಪ್ಲೆಸಿಸ್, ಶೇನ್ ವ್ಯಾಟ್ಸನ್ ತಾ ಮುಂದು ನಾ ಮುಂದು ಎಂದು ಆಟವಾಡಿದರು. ಈ ಮೂಲಕ ಇಬ್ಬರ ಜೋಡಿ ಪಂಜಾಬ್ ತಂಡದ ಪೂರ್ತಿ ಮೊತ್ತವನ್ನು ಬಾರಿಸಿತು. ಡುಪ್ಲೆಸಿಸ್ 53 ಬಾಲ್‍ಗೆ 87 ರನ್(ಸಿಕ್ಸರ್, 11 ಬೌಂಡರಿ) ಚೆಚ್ಚಿದರು. ವ್ಯಾಟ್ಸನ್ ತಾವೂ 53 ಬಾಲ್ ಎದುರಿಸಿ 83 ರನ್(3 ಸಿಕ್ಸ್, 11 ಬೌಂಡರಿ) ಚೆಚ್ಚುವ ಮೂಲಕ ತಂಡಕ್ಕೆ ಜಯದ ಉಡುಗೊರೆ ನೀಡಿದರು.ಡುಪ್ಲೆಸಿಸ್ ಒಂದೇ ಓವರ್ ನಲ್ಲಿ ನಾಲ್ಕು ಬೌಂಡರಿ
ಪವರ್ ಪ್ಲೇಯ ಕೊನೇಯ ಓವರ್ ನಲ್ಲೇ ಡುಪ್ಲೆಸಿಸ್ ಬರೋಬ್ಬರಿ ನಾಲ್ಕು ಬೌಂಡರಿ ಚೆಚ್ಚುವ ಮೂಲಕ ಒಂದೇ ಓವರ್ ನಲ್ಲಿ 18 ರನ್ ಕಲೆ ಹಾಕಿದರು. ವ್ಯಾಟ್ಸನ್ ಮೊದಲ ಬಾಲ್‍ನಲ್ಲಿ ಸಿಂಗಲ್ ತೆಗೆದುಕೊಟ್ಟ ಬಳಿಕ ಡುಪ್ಲೆಸಿಸ್ ಮೇಲಿಂದ ಮೇಲೆ ಬೌಂಡರಿ ಬಾರಿಸಿದರು. ಇದೇ ಓವರ್ ನಲ್ಲಿ ಡುಪ್ಲೆಸಿಸ್ ಹೆಚ್ಚು ರನ್ ಗಳಿಸಿದರು.
ಹತ್ತನೇ ಓವರ್ ತಲುಪುವ ವೇಳೆಗೆ ಈ ಜೋಡಿ 101 ರನ್‍ಗಳನ್ನು ಕಲೆ ಹಾಕಿತ್ತು. ಇದೇ ವೇಳೆ ಓವರ್ ಮುಗಿಯುವಷ್ಟರಲ್ಲಿ ಶೇನ್ ವ್ಯಾಟ್ಸನ್ 31 ಬಾಲ್‍ಗೆ ಮೊದಲು ಅರ್ಧ ಶತಕ ಬಾರಿಸಿದರು. ಬಳಿಕ ಡುಪ್ಲೆಸಿಸ್ ಸಹ 33 ಬಾಲ್‍ಗೆ ಅರ್ಧ ಶತಕ ಸಿಡಿಸಿದರು. ನಂತರ ಆರಾಮದಾಯಕ ಆಟವಾಡಿದ ಜೋಡಿ 13 ಓವರ್ ಮುಗಿಯುವಷ್ಟರಲ್ಲಿ 123 ರನ್ ಗಳಿಸಿತು.
15ನೇ ಓವರ್ ಮುಗಿಯುವ ಹೊತ್ತಿಗೆ ಇಬ್ಬರ ಭರ್ಜರಿ ಜೊತೆಯಾಟದಿಂದಾಗಿ ಬರೋಬ್ಬರಿ 150 ರನ್ ಸಿಡಿಸಿದ್ದರು. ವ್ಯಾಟ್ಸನ್ 49 ಬಾಲ್‍ಗೆ 76 ರನ್(3 ಸಿಕ್ಸ್, 10 ಬೌಂಡರಿ) ಚೆಚ್ಚಿದರೆ, ಡುಪ್ಲೆಸಿಸ್ 43 ಬಾಲ್‍ಗೆ 63 ರನ್(8 ಬೌಂಡರಿ)ಬಾರಿಸಿದರು. ಅದಾಗಲೇ ಚೆನ್ನೈ ತಂಡದಲ್ಲಿ ಗೆಲುವಿನ ನಗೆ ಮೂಡಿತ್ತು.