ಬೆಳಗಾವಿ: ಪ್ರತಿಯೊಂದು ದೇಶದ ಭವಿಷ್ಯ ಅಲ್ಲಿಯ ಮಕ್ಕಳ ಸಮಗ್ರ ಅಭಿವೃದ್ಧಿಯ ಮೇಲೆ ನಿಂತಿದೆ. ಮಕ್ಕಳ ಅಭಿವೃದ್ಧಿಯು ಅವರ ಶಿಕ್ಷಣದ ಮೇಲಿದೆ. ಹೀಗಾಗಿ ಎಲ್ಲ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವತ್ತ ಹೆಚ್ಚಿನ ಗಮನ ಕೊಡಬೇಕಿದೆ ಎಂದು ಶಿಕ್ಷಕ ಮಲಿಕಜಾನ ಗದಗಿನ ಹೇಳಿದರು.
ಕಣಬರಗಿಯ ಶ್ರೀ ರವಿಶಂಕರ ವಿದ್ಯಾವರ್ಧಕ ಸಂಸ್ಥೆಯ ಸಮತಾ ಶಾಲೆಯಲ್ಲಿ ಜರುಗಿದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಪಂಚ ವಾರ್ಷಿಕ ಯೋಜನೆಗಳ ಮೂಲಕ ಕೃಷಿ, ಕೈಗಾರಿಕೆ ಹಾಗೂ ವಿಜ್ಞಾನ ಕ್ಷೇತ್ರಗಳಲ್ಲಿ ಅಗಾಧ ಪ್ರಗತಿ ಸಾಧಿಸಿ ಹಸಿರು ಕ್ರಾಂತಿ, ಕ್ಷೀರಕ್ರಾಂತಿ ಹಾಗೂ ಕೈಗಾರಿಕಾ ಕ್ರಾಂತಿ ಮಾಡಿ ಸ್ವಾವಲಂಬಿ ಭಾರತ ನಿರ್ಮಿಸಿದರು ನೆಹರು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಶಂಕರ ಬಾಗೇವಾಡಿ, ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡ ಅನೇಕ ಮಹನೀಯರಲ್ಲಿ ನೆಹರೂ ಪ್ರಮುಖರು. ತಮ್ಮ ಸಮಾಜವಾದಿ ಸಿದ್ಧಾಂತದಿಂದ ಸರ್ವರಿಗೂ ಸಮ ಪಾಲು, ಸರ್ವರಿಗೂ ಬಾಳು ಎನ್ನುವ ಕಲ್ಪನೆ ಕೊಟ್ಟರು.
ಕೃಷಿ ಪ್ರಧಾನ ದೇಶದಲ್ಲಿ ರೈತ ಸ್ವಾವಲಂಬಿಯಾಗಬೇಕೆನ್ನುವ ಕನಸು ಕಂಡು ಮೊದಲ ಹತ್ತು ವರ್ಷದ ಅವಧಿಯಲ್ಲಿ ಹಸಿರು ಕ್ರಾಂತಿಯಾಗುವಲ್ಲಿ ಪ್ರರೇಪಿಸಿದರು ಎಂದರು. ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು. ಲಕ್ಷ್ಮೀ ಬುಡ್ರಾಗೋಳ ಹಾಗೂ ಭಾಗ್ಯ ಹಗೆದಾಳ ಪ್ರಾರ್ಥಿಸಿದರು. ಪ್ರಜ್ವಲ ಕೋಳಿ ಸ್ವಾಗತಿಸಿದರು. ಸಾನಿಕಾ ಪೋತೆನ್ನವರ ನಿರೂಪಿಸಿದರು. ಗಣೇಶ ಗುಣಗಾ ವಂದಿಸಿದರು.