ಬೆಂಗಳೂರು: ಕೆಂಪೇಗೌಡರು ಹೇಗೆ ಕಲ್ಪನೆ ಮಾಡಿದ್ದರೋ ಹಾಗೆ ಬೆಂಗಳೂರಿನ ಅಭಿವೃದ್ಧಿ ಮಾಡಲು ನಾವು ಸಂಕಲ್ಪ ಮಾಡಿದ್ದೇವೆ. ಕರ್ನಾಟಕವು ಡಬಲ್ ಇಂಜಿನ್ ಬಲದಲ್ಲಿ ಸಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಂದೇ ಭಾರತ್ ರೈಲು, ವಿಮಾನ ನಿಲ್ದಾಣದಲ್ಲಿ ಎರಡನೇ ಟರ್ಮಿನಲ್ ಉದ್ಘಾಟನೆ ಮತ್ತು ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
”ಕರ್ನಾಟಕ ಸಮಸ್ತ ಜನತೆಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು.” ಎಂದು ಕನ್ನಡದಲ್ಲಿ ಮಾತು ಆರಂಭಿಸಿದರು.
ಕರ್ನಾಟಕಕ್ಕಿಂದು ಮೊದಲ ಮೇಡ್ ಇನ್ ಇಂಡಿಯಾ ವಂದೇ ಭಾರತ್ ರೈಲು ಸಿಕ್ಕಿದೆ. ರಾಜ್ಯದ ಜನತೆಗೆ ಆತೋಧ್ಯಾ- ಪ್ರಯಾಗ್ ರಾಜ್ ಕಾಶಿ ದರ್ಶನ ಮಾಡುವ ಭಾರತ್ ಗೌರವ್ ಕಾಶಿ ದರ್ಶನ ರೈಲು ಉದ್ಘಾಟನೆಯಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ 2 ನ ಕೆಲವು ಫೋಟೊಗಳನ್ನು ಕೆಲ ದಿನಗಳ ಮೊದಲು ನಾನು ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದೆ. ಆದರೆ ಅಲ್ಲಿ ಹೋಗಿ ನೋಡಿದಾಗ ಫೋಟೊಕ್ಕಿಂತ ಟರ್ಮಿನಲ್ ಚೆನ್ನಾಗಿದೆ. ಇದು ಬೆಂಗಳೂರಿನ ಜನತೆಯ ಹಲವು ಸಮಯದ ಬೇಡಿಕೆಯಾಗಿತ್ತು. ಇಂದು ನಮ್ಮ ಸರ್ಕಾರ ಅದನ್ನು ಪೂರ್ಣಗೊಳಿಸಿದೆ ಎಂದರು.
ವಿಶ್ವದಲ್ಲಿ ಭಾರತವು ತನ್ನ ಸ್ಟಾರ್ಟ್ ಅಪ್ ಗಳಿಂದ ಗುರುತಿಸಿಕೊಳ್ಳುತ್ತಿದೆ. ಅದಕ್ಕೆ ಬೆಂಗಳೂರು ದೊಡ್ಡ ಕೊಡುಗೆ ನೀಡುತ್ತಿದೆ. ಬೆಂಗಳೂರು ಸ್ಟಾರ್ಟ್ ಅಪ್ ಸ್ಪಿರಿಟ್ ನ ಪ್ರತಿನಿಧಿಯಾಗಿದೆ. ದೇಶದಲ್ಲಿ ನಡೆಯುತ್ತಿರುವ ಬಂಡವಾಳ ಹೂಡಿಕೆಯಿಂದ ಕರ್ನಾಟಕವೂ ಲಾಭ ಪಡೆಯುತ್ತಿದೆ ಎಂದರು.