ಬೆಳಗಾವಿಯ ಕೆಎಲ್‍ಇ ಡಾ.ಪ್ರಭಾಕರ್ ಕೋರೆ ಆಸ್ಪತ್ರೆಯ ಎಮ್‍ಆರ್‍ಸಿ, ಇಎನ್‍ಟಿ ಮತ್ತು ಎಚ್‍ಎನ್‍ಎಸ್ ವಿಭಾಗವು ರಾಯಬಾಗ ಮತ್ತು ಬೆಳಗಾವಿಯಿಂದ ಬಂದಿದ್ದ ಇಬ್ಬರು ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡುವ ಮೂಲಕ ಸುಧಾರಿತ ವೈದ್ಯಕೀಯ ಚಿಕಿತ್ಸೆಯಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.
ಹೌದು ಮಕ್ಕಳಲ್ಲಿ ಶಾಶ್ವತವಾಗಿ ಬಾಲ್ಯದಿಂದ ಇದ್ದ ಕಿವುಡುತನ ನಿವಾರಣೆಗಾಗಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ. ಶ್ರವಣ ಸಾಧನಗಳ ಪ್ರಯೋಜನವನ್ನು ಪಡೆಯದ ಅಂತಹ ಮಕ್ಕಳಿಗೆ ಈ ಶಸ್ತ್ರಚಿಕಿತ್ಸೆಯು ಏಕೈಕ ಭರವಸೆಯಾಗಿದೆ. ಕೆಎಲ್‍ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಎಮ್‍ಆರ್‍ಸಿ, ಕರ್ನಾಟಕ ಸರ್ಕಾರದಿಂದ ಸುರಕ್ಷಾ ಆರೋಗ್ಯ ಸುವರ್ಣ ಟ್ರಸ್ಟ್ ಅಡಿಯಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಎಂಪನೆಲ್ ಮಾಡಲಾದ ಉತ್ತರ ಕರ್ನಾಟಕದ ಏಕೈಕ ಖಾಸಗಿ ಆಸ್ಪತ್ರೆಯಾಗಿದೆ. ಅಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರ ನಿರಂತರ ಪ್ರಯತ್ನದಿಂದ ಈ ಕಾರ್ಯ ಸಾಧ್ಯವಾಗಿದೆ.
ಬೆಳಗಾವಿಯ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿನ ಹಳೆ ವಿದ್ಯಾರ್ಥಿಯೂ ಆಗಿರುವ ಬೆಂಗಳೂರಿನ ಶಸ್ತ್ರಚಿಕಿತ್ಸಕ ಡಾ.ವಸಂತಿ ಆನಂದ್ ಅವರು ಈ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ. ಇಎನ್‍ಟಿ ಮತ್ತು ಎಚ್‍ಎನ್‍ಎಸ್ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ.ಬೆಳಲ್ದಾವರ್, ಇಎನ್‍ಟಿ ಮತ್ತು ಎಚ್‍ಎನ್‍ಎಸ್ ವಿಭಾಗದ ಪ್ರಾಧ್ಯಾಪಕರಾದ ಡಾ.ಎ.ಎಸ್.ಹಾರುಗೊಪ್ಪ, ಡಾ.ಪ್ರೀತಿ ಹಜಾರೆ ಈ ತಂಡದಲ್ಲಿದ್ದರು. ಅರವಳಿಕೆ ವಿಭಾಗದ ಡಾ.ಕೇದಾರೇಶ್ವರ್ ಶಸ್ತ್ರಚಿಕಿತ್ಸೆಗೆ ಸಹಕರಿಸಿದರು.