ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ ‘ಗಂಧದ ಗುಡಿ’ ಎಲ್ಲಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಪ್ಪು ಕನಸಿನ ಚಿತ್ರವನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳುತ್ತಿದ್ದಾರೆ. ಆದರೆ ಎರಡೇ ವಾರಕ್ಕೆ ಈ ಚಿತ್ರವನ್ನು ನರ್ತಕಿ ಚಿತ್ರಮಂದಿರದಿಂದ ತೆಗೆದು ಅಲ್ಲಿ ‘ರಾಣಾ’ ಚಿತ್ರವನ್ನು ಹಾಕುತ್ತಿರುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಪಿಆರ್‌ಕೆ ಪ್ರೊಡಕ್ಷನ್ಸ್ ಹಾಗೂ ಮಡ್‌ಸ್ಕಿಪರ್ ಜಂಟಿಯಾಗಿ ಈ ಡಾಕ್ಯೂ ಡ್ರಾಮಾ ಸಿನಿಮಾವನ್ನು ನಿರ್ಮಾಣ ಮಾಡಿವೆ. ಕರ್ನಾಟದ ಅರಣ್ಯ ಹಾಗೂ ವನ್ಯಜೀವಿ ಸಂಪತ್ತು ಜಗತ್ತಿಗೆ ಪರಿಚಯಿಸಬೇಕು, ಅದರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಬೇಕು ಎನ್ನುವ ಮಹದಾಸೆಯಿಂದ ಪುನೀತ್ ರಾಜ್‌ಕುಮಾರ್ ಈ ಕನಸು ಕಂಡಿದ್ದರು.ವವೈಲ್ಡ್ ಲೈಫ್ ಫೋಟೊಗ್ರಫರ್ ಅಮೋಘ ವರ್ಷ ಅವರಿಗೆ ಸಾಥ್ ಕೊಟ್ಟಿದ್ದರು. ಅಕ್ಟೋಬರ್ 28ಕ್ಕೆ ಸಿನಿಮಾ ಬಹಳ ಅದ್ಧೂರಿಯಾಗಿ ತೆರೆಗಪ್ಪಳಿಸಿತ್ತು. ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿದ್ದರು. ನೋಡುತ್ತಲೇ ಇದ್ದಾರೆ.
ಪುನೀತ್ ರಾಜ್‌ಕುಮಾರ್ ಲಕ್ಕಿ ಥಿಯೇಟರ್ ನರ್ತಕಿಯಲ್ಲಿ ಸಿನಿಮಾ ರಿಲೀಸ್ ಆಗಿತ್ತು. ದೊಡ್ಮನೆ ಸದಸ್ಯರು ಕೂಡ ಅಲ್ಲೇ ಬಂದು ಸಿನಿಮಾ ನೋಡಿದ್ದರು. ದೊಡ್ಡಮಟ್ಟದಲ್ಲೇ ಚಿತ್ರಕ್ಕೆ ಸ್ವಾಗತ ಸಿಕ್ಕಿತ್ತು. ಅದೇ ಚಿತ್ರಕ್ಕೆ ಮೇನ್ ಥಿಯೇಟರ್ ಆಗಿತ್ತು. ಆದರೆ ಎರಡೇ ವಾರಕ್ಕೆ ಅಲ್ಲಿಂದ ಸಿನಿಮಾ ತೆಗೆಯುತ್ತಿರುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ.
ಅಭಿಮಾನಿಗಳ ಬೇಸರ
‘ಗಂಧದ ಗುಡಿ’ ಚಿತ್ರದ ವಿತರಣೆ ಹಕ್ಕನ್ನು ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ವಹಿಸಿಕೊಂಡಿದೆ. ಬಹಳ ದೊಡ್ಡಮಟ್ಟದಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದೆ. ರಿಷಬ್ ಶೆಟ್ಟಿ ‘ಕಾಂತಾರ’ ಜೊತೆಗೆ ‘ಗಂಧದ ಗುಡಿ’ ಸಿನಿಮಾ ಕೂಡ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನರ್ತಕಿ ಚಿತ್ರಮಂದಿರದಿಂದ ಈಗ ಸಿನಿಮಾ ತೆಗೆಯುತ್ತಿರುವುದಕ್ಕೆ ಅಭಿಮಾನಿಗಳು ಕೆಆರ್‌ಜಿ ಸ್ಟುಡಿಯೋಸ್ ಮೇಲೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಉತ್ತಮವಾಗಿ ಪ್ರದರ್ಶನವಾಗುತ್ತಿರುವ ಸಿನಿಮಾ ತೆಗೆದು ಬೇರೆ ಸಿನಿಮಾ ಹಾಕುತ್ತಿರುವುದು ಯಾಕೆ ಎಂದು ಕೇಳುತ್ತಿದ್ದಾರೆ.
ಸಿನಿಮಾ ತೆಗೆಯುತ್ತಿರುವುದು ಯಾಕೆ?
ನಿಜವಾಗಿಯೂ ಸಿನಿಮಾ ಉತ್ತಮ ರೀತಿಯಲ್ಲಿ ಪ್ರದರ್ಶನ ಆಗುತ್ತಿದ್ದರೆ ವಿತರಕರು ಚಿತ್ರವನ್ನು ತೆಗೆಯುವುದಿಲ್ಲ. ಚೆನ್ನಾಗಿ ಓಡುತ್ತಿರುವ ಚಿತ್ರವನ್ನು ಯಾಕೆ ತೆಗೆಯುತ್ತಾರೆ ಎನ್ನುವುದು ಕೆಲವರ ವಾದ. ಇದು ಮಾಮೂಲಿ ಕಮರ್ಷಿಯಲ್ ಸಿನಿಮಾ ಅಲ್ಲ. ಈಗಾಗಲೇ ಬಹುತೇಕ ಎಲ್ಲರೂ ಸಿನಿಮಾ ನೋಡಿದ್ದಾರೆ. ಅಸಲಿಗೆ ಈಗ ಮೇನ್ ಥಿಯೇಟರ್ ಕಾನ್ಸೆಪ್ಟ್ ಕೂಡ ಇಲ್ಲ. ಪ್ರೇಕ್ಷಕರು ಒಳ್ಳೆ ಸಿನಿಮಾ ಇದ್ದರೆ ಎಲ್ಲಿ ಬೇಕಾದರೂ ಹುಡುಕಿಕೊಂಡು ಹೋಗಿ ನೋಡುತ್ತಾರೆ. 3ನೇ ವಾರವೂ ಸಾಕಷ್ಟು ಸ್ಕ್ರೀನ್‌ಗಳಲ್ಲಿ ‘ಗಂಧದ ಗುಡಿ’ ಸಿನಿಮಾ ಪ್ರದರ್ಶನ ಮುಂದುವರೆಯುತ್ತಿದೆ ಎನ್ನುವುದು ಕೆಲವರ ವಾದ.
4 ದಿನಗಳ ಕಾಲ ಟಿಕೆಟ್ ದರ ಇಳಿಕೆ
ಈ ಸಂದೇಶಾತ್ಮಕ ಡಾಕ್ಯುಡ್ರಾಮಾ ಸಿನಿಮಾವನ್ನು ಎಲ್ಲರೂ ನೋಡಬೇಕು ಎನ್ನುವ ಕಾರಣಕ್ಕೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಟಿಕೆಟ್ ದರ ಇಳಿಸಿದ್ದರು. ಸೋಮವಾರದಿಂದ ಗುರುವಾರದವರೆಗೆ ನಾಲ್ಕು ದಿನಗಳ ಕಾಲ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ 56 ರೂ. ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ 112 ರೂಪಾಯಿಗೆ ಟಿಕೆಟ್ ದರ ನಿಗದಿಪಡಿಸಲಾಗಿದೆ. ಮಕ್ಕಳು ಸೇರಿದಂತೆ ಎಲ್ಲರೂ ಈ ಸಿನಿಮಾ ನೋಡಬೇಕು ಎನ್ನುವ ಕಾರಣಕ್ಕೆ ವಿತಕರಕರು ಹಾಗೂ ಪ್ರದರ್ಶಕರ ಜೊತೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.
ಅಪ್ಪು ಕನಸು ನನಸು
ಮಾಮೂಲಿ ಕಮರ್ಷಿಯಲ್ ಸಿನಿಮಾಗಳನ್ನು ಬಿಟ್ಟು ಪುನೀತ್ ರಾಜ್‌ಕುಮಾರ್ ತಾವು ತಾವಾಗಿಯೇ ‘ಗಂಧದ ಗುಡಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಡಿನ ಸಂರಕ್ಷಣೆಗಾಗಿ ಜಾಗೃತಿ ಮೂಡಿಸುವಂತಹ ಅದ್ಭುತ ಚಿತ್ರವನ್ನು ಕಟ್ಟಿಕೊಟ್ಟಿದ್ದಾಋಎ. ಅದರ ನಿರ್ಮಾಣದ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡಿದ್ದರು. ರಾಜ್ಯದ ಮೂಲೆ ಮೂಲೆ ಸುತ್ತಾಡಿ ಕಾಡು ಮೇಡು ಅಲೆದಾಡಿ ಅದ್ಭುತ ದೃಶ್ಯಕಾವ್ಯವನ್ನು ತೆರೆಗೆ ತಂದಿದ್ದರು. ಆದರೆ ಸಿನಿಮಾ ಟೀಸರ್ ಬಿಡುಗಡೆಗೂ ಮೊದಲೇ ಅವರು ಬಾರದ ಲೋಕಕ್ಕೆ ಹೊರಟುಬಿಟ್ಟರು. ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಕನಸನ್ನು ನನಸು ಮಾಡಿದ್ದಾರೆ. ಪ್ರೇಕ್ಷಕರು ಕೂಡ ‘ಗಂಧದ ಗುಡಿ’ ಚಿತ್ರವನ್ನು ಅಪ್ಪಿಕೊಂಡಿದ್ದಾರೆ.