ನನ್ನ ಅನುಭವದ ಪ್ರಕಾರ ಮಾರ್ಚ್ ಇಲ್ಲವೇ ಎಪ್ರಿಲ್ ನಲ್ಲಿ ಚುನಾವಣೆ ನಡೆಯಬೇಕು. ಅದೇ ಸಂದರ್ಭದಲ್ಲಿ ಚುನಾವಣೆ ಆಗಲಿದೆ ಎಂಬ ಹೇಳಿಕೆ ನೀಡುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಪೂರ್ಣಾವಧಿ ಆಡಳಿತ ನಡೆಸಲಿದೆ ಎಂಬುದನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರ ಶಕ್ತಿ ಪ್ರದರ್ಶನ ಬಿಜೆಪಿಗೆ ಪರಿಣಾಮ ಬೀರುವುದಿಲ್ಲ. ರಾಹುಲ್ ಗಾಂಧಿ ಅವರು ಮಾಡಿದ ಭಾರತ ಜೋಡೋ ಪರಿಣಾಮವು ಇಲ್ಲ. ಇದೀಗ ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೇ ಆಯ್ಕೆಯಾಗಿದ್ದು ಖುಷಿ ತಂದಿದೆ. ಆದರೆ ಅವರು ಬೆಂಗಳೂರಿನಲ್ಲಿ ನಿನ್ನೆ ಮಾಡಿದ ಬೃಹತ್ ಕಾರ್ಯಕ್ರಮದಿಂದ ರಾಜ್ಯದ ರಾಜಕಾರಣದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದರು.
ರಾಹುಲ್ ಗಾಂಧಿ ಅವರು ತೆಲಂಗಾಣ, ರಾಯಚೂರು ಸೇರಿದಂತೆ ಇನ್ನಿತರ ಕಡೆಗಳಲ್ಲಿ ಪಾದಯಾತ್ರೆ ಮಾಡಿದ್ದಾರೆ. ಆದರೆ ತೆಲಂಗಾಣದಲ್ಲಿ ಕಾಂಗ್ರೆಸ್ ನ ಸ್ಥಿತಿ ಏನಾಗಿದೆ ಎಂಬುದು ಜನರಿಗೆ ಗೊತ್ತಿದೆ. ದೇಶದ ಏಳು ಉಪಚುನಾವಣೆಯಲ್ಲಿ ಬಿಜೆಪಿ 4 ರಲ್ಲಿ ಗೆಲುವು ಸಾಧಿಸಿದೆ. ಉಳಿದ ಮೂರರಲ್ಲಿ ಕಾಂಗ್ರೆಸ್ ವಿಳಾಸವಿಲ್ಲದಾಗಿದೆ. ಹೀಗಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡಲಿ, ನೂತನ ಅಧ್ಯಕ್ಷರನ್ನು ನೇಮಕ ಮಾಡಲಿ ಇದರಿಂದ ರಾಷ್ಟ್ರ ಮತ್ತು ರಾಜ್ಯದ ರಾಜಕಾರಣದಲ್ಲಿ ಏನೂ ಆಗುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಟಿಪ್ಪು ಜಯಂತಿ ನಿರ್ಧಾರ ಪಾಲಿಕೆ ಕೈಗೊಳ್ಳುವುದು: ಹುಬ್ಬಳ್ಳಿಯ ಈದ್ಗಾ ಮೈದಾನ ಪಾಲಿಕೆಗೆ ಸೇರಿದ್ದು, ಹೀಗಾಗಿ ಪಾಲಿಕೆ ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲಿದೆ. ಈ ಹಿಂದೆಯೂ ಗಣೇಶೋತ್ಸವದ ವೇಳೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಆಚರಣೆ ಅನುಮತಿ ನೀಡಲಾಗಿತ್ತು. ಇದೀಗ ಪಾಲಿಕೆ ಯೋಗ್ಯ ನಿರ್ಧಾರ ಕೈಗೊಳ್ಳಲಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು