ನವದೆಹಲಿ: ಉತ್ತರಪ್ರದೇಶದ ಹತ್ರಾಸ್ ಗ್ರಾಮದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ಸಾವಿಗೆ ದೇಶದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಆರೋಪಿಗಳನ್ನು ನೇಣಿಗೇರಿಸುವಂತೆ ದೇಶದ ಮೂಲೆಮೂಲೆಯಿಂದಲೂ ಕೂಗು ಕೇಳಿ ಬಂದಿದೆ. ಈ ನಡುವೆ ಸಂತ್ರಸ್ತೆಯ ಸಾವಿನ ಬಗ್ಗೆ ಟ್ವೀಟ್ ಮಾಡಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ನಟಿ ರಮ್ಯಾ ತಿರುಗೇಟು ನೀಡಿದ್ದಾರೆ.
ನಟ ಅಕ್ಷಯ್ ಕುಮಾರ್ ರೇಪ್ ಸಂತ್ರಸ್ತೆಯ ಸಾವಿನ ನಂತರ ಅಪರಾಧಿಗಳನ್ನು ಗಲ್ಲಿಗೇರಿಸಿ. ಹೆಣ್ಣುಮಕ್ಕಳನ್ನು ಮತ್ತು ಸಹೋದರಿಯರನ್ನು ರಕ್ಷಿಸಲು ಧ್ವನಿ ಎತ್ತುವುದು ನಮ್ಮ ಕರ್ತವ್ಯ ಎಂದು ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಟ್ವೀಟ್‍ಗೆ ಪ್ರತಿಕ್ರಿಯಿಸಿದ ನಟಿ, ಮಾಜಿ ಸಂಸದೆ ರಮ್ಯಾ ಬಿಜೆಪಿ ಮತ್ತು ಪಿಎಂ ಮೋದಿ ವಿರುದ್ಧ ಮಾತನಾಡಿದ್ದಾರೆ.
ಅಕ್ಷಯ್ ಕುಮಾರ್ ಟ್ವೀಟ್:
“ಕೋಪ ಮತ್ತು ಹತಾಶೆ! ಹತ್ರಾಸ್ ಗ್ಯಾಂಗ್‍ರೇಪ್‍ನಲ್ಲಿ ಇಂತಹ ಕ್ರೂರತೆ. ಇದು ಯಾವಾಗ ನಿಲ್ಲುತ್ತದೆ? ನಮ್ಮ ಕಾನೂನುಗಳು ಮತ್ತು ಅವುಗಳನ್ನು ಜಾರಿಗೊಳಿಸುವಿಕೆಯು ಕಟ್ಟುನಿಟ್ಟಾಗಿರಬೇಕು. ಕೇವಲ ಶಿಕ್ಷೆಯ ಆಲೋಚನೆಯೇ ಅತ್ಯಾಚಾರಿಗಳನ್ನು ಭಯದಿಂದ ನಡುಗಿಸಬೇಕಾಗುತ್ತದೆ. ಹೀಗಾಗಿ ಅಪರಾಧಿಗಳನ್ನು ಗಲ್ಲಿಗೇರಿಸಿ. ಹೆಣ್ಣುಮಕ್ಕಳನ್ನು ಮತ್ತು ಸಹೋದರಿಯರನ್ನು ರಕ್ಷಿಸಲು ಧ್ವನಿಯನ್ನು ಹೆಚ್ಚಿಸಿ. ಇದು ನಾವು ಮಾಡಬಹುದಾದ ಕನಿಷ್ಠ ಕರ್ತವ್ಯ” ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದರು.
ನೀವು ನಿರಾಶೆಗೊಳ್ಳುವುದನ್ನು ಮುಂದುವರಿಸುತ್ತೀರಿ. ಯಾಕೆಂದರೆ ಇದು ಕೊನೆಯದಾಗಿರುವುದಿಲ್ಲ. ಏಕೆ ಎಂದು ನಿಮಗೆ ತಿಳಿದಿದೆಯೇ? ಎಂದು ರಮ್ಯಾ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ “ಇದು ಕಾನೂನಿನ ವಿಚಾರವಲ್ಲ, ಇದು ದ್ವೇಷಪೂರಿತ ಮನಸ್ಥಿತಿ. ಇಂತಹ ಮನಸ್ಥಿತಿಯನ್ನು ಯಾರು ಪೋಷಿಸುತ್ತಿದ್ದಾರೆ? ಬಿಜೆಪಿ ಎಂದಿದ್ದಾರೆ.
ಮೊದಲಿಗೆ ಪ್ರಧಾನಿ ಮೋದಿ ಪ್ರತಿದಿನ ಮಹಿಳೆಯರಿಗೆ ಅತ್ಯಾಚಾರದ ಬೆದರಿಕೆ ಹಾಕುವ ರಾಕ್ಷಸರನ್ನು ಅನುಸರಿಸುತ್ತಾರೆ. ಹೀಗಾಗಿ ಬದಲಾವಣೆ ಮೇಲ್ಭಾಗದಲ್ಲಿ ಪ್ರಾರಂಭವಾಗಬೇಕು ಎಂದು ನೀವು ಯೋಚಿಸುವುದಿಲ್ಲವೇ?” ಎಂದು ಅಕ್ಷಯ್ ಕುಮಾರ್ ಟ್ವೀಟ್‍ಗೆ ರಮ್ಯಾ ತಿರುಗೇಟು ನೀಡಿದ್ದಾರೆ.
ಅಕ್ಷಯ್ ಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರ ಅನುಯಾಯಿ. ಅಲ್ಲದೇ ಅವರ ಸರ್ಕಾರವನ್ನು ಬೆಂಬಲಿಸಿರುವ ನಟ. ಆದ್ದರಿಂದ ರಮ್ಯಾ ಅಕ್ಷಯ್ ಕುಮಾರ್ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಕುವೈತ್ ದೊರೆ ಮೃತಪಟ್ಟಿದ್ದಕ್ಕೆ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದರು. ಹೀಗಾಗಿ ಅತ್ಯಾಚಾರ ಸಂತ್ರಸ್ತೆ ಬಗ್ಗೆ ಏಕೆ ಮಾತನಾಡಿಲ್ಲ ಎಂದು ಮೋದಿಯನ್ನು ಪ್ರಶ್ನಿಸಿದ್ದಾರೆ.
“ಕ್ರೂರವಾಗಿ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಮಹಿಳೆ ಕಥೆ ಏನು ಮೋದಿ ಜಿ? ನಿಮ್ಮ ಖಂಡನೆಯನ್ನು ಅಥವಾ ಸಂತಾಪವನ್ನು ನಾವು ನಿರೀಕ್ಷಿಸುವುದಿಲ್ಲ. ಮಹಿಳೆಯರಿಗೆ ಪ್ರತಿದಿನ ಅತ್ಯಾಚಾರ ಮತ್ತು ಮಾರಣಾಂತಿಕ ಬೆದರಿಕೆಗಳನ್ನು ಹಾಕುವ ರಾಕ್ಷಸರನ್ನು ಅನುಸರಿಸುವ ನೀವು, ಮಹಿಳೆಯರ ಬಗ್ಗೆ ಹೊಂದಿರುವ ಗೌರವ, ಅನುಭೂತಿ ಮತ್ತು ಸಹಾನುಭೂತಿ ಏನು ಎಂಬುದಕ್ಕೆ ಸಾಕ್ಷಿಯಾಗಿದೆ” ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.
ಗ್ಯಾಂಗ್‍ರೇಪ್ ಪ್ರಕರಣ?
ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆಗೊಳಗಾಗಿ ಎರಡು ವಾರಗಳ ಅಂದರೆ ಮಂಗಳವಾರ ದೆಹಲಿಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ 20 ವರ್ಷದ ಯುವತಿಯ ಅಂತ್ಯಸಂಸ್ಕಾರವನ್ನು ಕಳೆದ ರಾತ್ರಿ ಪೊಲೀಸರೇ ನೆರವೇರಿಸಿದ್ದಾರೆ. ಈ ವೇಳೆ ಮೃತ ಯುವತಿಯ ಕುಟುಂಬ ಮತ್ತು ಸಂಬಂಧಿಕರನ್ನು ಅವರ ಮನೆಯಲ್ಲೇ ಕೂಡಿಹಾಕಿದ್ದಾರೆ ಎಂದು ಆರೋಪ ಕೇಳಿಬಂದಿದೆ.