ಬೆಂಗಳೂರು: ಉತ್ತರಪ್ರದೇಶದ ಹತ್ರಾಸ್ ಗ್ರಾಮದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ಪೊಲೀಸರೇ ನೆರವೇರಿಸಿದ್ದಕ್ಕೆ ಇದೀಗ ದೇಶದ ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅಂತೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಕೂಡ ಯೋಗಿ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಮಾಜಿ ಸಿಎಂ, ಉತ್ತರಪ್ರದೇಶದಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆಯ ಹೊಣೆಯನ್ನು ಯೋಗಿ ಆದಿತ್ಯನಾಥ್ ಮಾತ್ರವಲ್ಲ, ಅವರನ್ನು ಬೆಂಬಲಿಸುತ್ತಿರುವ ನರೇಂದ್ರ ಮೋದಿ ಹಾಗೂ ಸಮಸ್ತ ಸಂಘ ಪರಿವಾರ ಕೂಡ ಹೊರಬೇಕಾಗುತ್ತದೆ. ತಕ್ಷಣ ಯೋಗಿ ಆದಿತ್ಯನಾಥ್ ಅವರನ್ನು ಕಿತ್ತು ಹಾಕಿ ಉತ್ತರಪ್ರದೇಶವನ್ನು ರಕ್ಷಿಸಿ ಎಂದು ಬರೆದುಕೊಂಡಿದ್ದಾರೆ.
ಇನ್ನೊಂದು ಟ್ವೀಟ್ ಮಾಡಿ, ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ಉತ್ತರಪ್ರದೇಶದ ದಲಿತ ಯುವತಿಗೆ ಗೌರವಪೂರ್ವಕ ಅಂತ್ಯಕ್ರಿಯೆಗೂ ಅವಕಾಶ ನೀಡದೆ, ಹೆತ್ತವರನ್ನು ಗೋಳಾಡಿಸಿದ ಯೋಗಿ ಆದಿತ್ಯನಾಥ್ ಕಾವಿಧಾರಿಗಳ ಪಾಲಿನ ಕಳಂಕ. ಇವರ ಆಡಳಿತದಲ್ಲಿ ಉತ್ತರಪ್ರದೇಶದ ಯಾವ ಹೆಣ್ಣು ಮಕ್ಕಳು ಸುರಕ್ಷಿತವಲ್ಲ. ಮೊದಲು ಇವರನ್ನು ವಜಾ ಮಾಡಿ ಎಂದು ಕಿಡಿಕಾರಿದ್ದಾರೆ.
ದಿನೇಶ್ ಗುಂಡೂರಾವ್ ಕೂಡ ಈ ಸಂಬಂಧ ಟ್ವೀಟ್ ಮಾಡಿ ಗರಂ ಆಗಿದ್ದಾರೆ. ಹತ್ರಾಸ್ ನಲ್ಲಿ ನಡೆದ ಘಟನೆಯ ಭಯಾನಕ ಅಂತ್ಯವಾಗಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಡಳಿತದಲ್ಲಿ ಇಂತಹ ಅನೇಕ ಭಯಾನಕ ಘಟನೆಗಳನ್ನು ನೋಡುತ್ತಿದ್ದೇವೆ. ಯೋಗಿ ಅವರು ಕೆಟ್ಟದ್ದನ್ನು ರಕ್ಷಿಸುವ ಹಾಗೂ ಪ್ರೇರೇಪಿಸುವಂತಹ ಆಡಳಿತವನ್ನು ನಡೆಸುತ್ತಿದ್ದಾರೆ. ಇದು ಅತ್ಯಂತ ಕ್ರೂರ ಮತ್ತು ಅಮಾನವೀಯವಾಗಿದೆ ಎಂದು ಬರೆದುಕೊಳ್ಳುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಸೆಪ್ಟೆಂಬರ್ 14ರಂದು ಉತ್ತರಪ್ರದೇಶದ ಹತ್ರಾಸ್ ಗ್ರಾಮದಲ್ಲಿ ಯುವತಿ ತನ್ನ ತಾಯಿಯೊಂದಿಗೆ ಹುಲ್ಲು ತರಲು ಹೋಗಿದ್ದಳು. ಈ ವೇಳೆ ನಾಲ್ವರು ಕಾಮುಕರು ಆಕೆಯನ್ನು ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅಲ್ಲದೆ ಆಕೆಯ ನಾಲಿಗೆ ಕತ್ತರಿಸಿ, ಬೆನ್ನುಮೂಳೆ ಹಾಗೂ ಕತ್ತಿಗೆ ಗಂಭೀರವಾಗಿ ಹಾನಿ ಮಾಡಿದ್ದರು. ಘಟನೆಯಿಂದ ತೀವ್ರ ಅಸ್ವಸ್ಥಳಾಗಿದ್ದ ಸಂತ್ರಸ್ತೆಯನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯಿಸಿರೆಳೆದಿದ್ದಳು.
ಇತ್ತ ಮಗಳನ್ನು ಕಳೆದುಕೊಳ್ಳುತ್ತಿದ್ದಂತೆಯೇ ಸಂತ್ರಸ್ತೆಯ ಕುಟುಂಬದವರ ರೋಧನ ಮುಗಿಲುಮುಟ್ಟಿತ್ತು. ಅಲ್ಲದೇ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಯಿತು. ಸಂತ್ರಸ್ತೆಯ ಸಾವು ಖಂಡಿಸಿ ಆಕೆಯ ಸಹೋದರ ಹಾಗೂ ತಂದೆ ಪ್ರತಿಭಟನೆ ನಡೆಸುತ್ತಿದ್ದಂತೆಯೇ, ಇತ್ತ ಪೊಲೀಸರು ಸಂತ್ರಸ್ತೆಯ ಮೃತದೇಹವನ್ನು ಕಪ್ಪು ಬಣ್ಣದ ಸ್ಕಾರ್ಪಿಯೋದಲ್ಲಿ ಸಾಗಿಸಿ ನಸುಕಿನ ಜಾವ 2.30ರ ಸುಮಾರಿಗೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.