Breaking News

‘ಇನ್‌ಸ್ಪೆಕ್ಟರ್‌ ಹುದ್ದೆಗೆ ₹70 ರಿಂದ ₹80 ಲಕ್ಷ ಕೊಟ್ಟು ಬಂದರೆ ಹೃದಯಾಘಾತವಾಗದೆ ಇನ್ನೇನಾಗುತ್ತದೆ;M.T.B.

Spread the love

ಬೆಂಗಳೂರು: ‘ಇನ್‌ಸ್ಪೆಕ್ಟರ್‌ ಹುದ್ದೆಗೆ ₹70 ರಿಂದ ₹80 ಲಕ್ಷ ಕೊಟ್ಟು ಬಂದರೆ ಹೃದಯಾಘಾತವಾಗದೆ ಇನ್ನೇನಾಗುತ್ತದೆ’ ಎಂದು ಸಚಿವ ಎಂ.ಟಿ.ಬಿ. ನಾಗರಾಜ್ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವಿಡಿಯೊವನ್ನು ಲಗತ್ತಿಸಿ ಟ್ವೀಟ್‌ ಮಾಡಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು, ‘ಈಗ ಸರ್ಕಾರವೇ ಸತ್ಯ ಹೇಳಿದೆ!

ಸದ್ಯ, ಸಾವಿನಲ್ಲೂ ಸತ್ಯ ಹೇಳುವ ಧೈರ್ಯವನ್ನು ಸರ್ಕಾರ ಮಾಡಿದೆ. ಬೊಮ್ಮಾಯಿ ಸಂಪುಟದ ಸಚಿವರೇ ವಿಷಯ ಬಹಿರಂಗಪಡಿಸಿದ್ದಾರೆ. ಸಚಿವ ಎಂ.ಟಿ.ಬಿ. ನಾಗರಾಜ್ ಅವರ ಹೇಳಿಕೆಯು ಈ ಸರ್ಕಾರದ ಕಾಸಿಗಾಗಿ ಪೋಸ್ಟಿಂಗ್ ದಂಧೆಗೆ ಹಿಡಿದ ಕನ್ನಡಿ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಸಚಿವರೇ ಹೇಳಿದಂತೆ ₹70-80 ಲಕ್ಷಗಳನ್ನು ನಂದೀಶ್ ಅವರು ಯಾರಿಗೆ ಕೊಟ್ಟರು? ಇದರಲ್ಲಿ ಅವರ ಮೇಲಿನ ಉನ್ನತ ಅಧಿಕಾರಿಗಳು, ಗೃಹ ಸಚಿವರು ಮತ್ತು ಮುಖ್ಯಮಂತ್ರಿಗೆ ಪರ್ಸಂಟೇಜ್ ಹೋಗಿದೆಯಾ? ಅಥವಾ ಕಾಣದ ರಿಮೋಟ್ ಯಾವುದಾದರೂ ಇದೆಯಾ? ಸಚಿವರಂತೆ ನೀವೂ ಸತ್ಯ ಹೇಳಿ ಸಿ.ಎಂ. ಸಾಹೇಬರೇ’ ಎಂದು ಟ್ವೀಟ್‌ ಮಾಡಿದ್ದಾರೆ.’ಸಂಘ ಸಂಸ್ಕಾರದ ಗೃಹ ಸಚಿವರು ಉತ್ತರ ನೀಡಲೇಬೇಕು. ಧಮ್ಮಿದ್ರೆ, ತಾಕತ್ತಿದ್ರೆ ಎನ್ನುವ ಮುಖ್ಯಮಂತ್ರಿ ಅವರು ಈ ಬಗ್ಗೆ ಮೌನ ಮುರಿಯುವ ತಾಕತ್ತು ತೋರಬೇಕು’ ಎಂದು ಹೇಳಿದ್ದಾರೆ.

ಅಮಾನತುಗೊಂಡಿದ್ದ ಕೆ.ಆರ್.ಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಎಚ್‌.ಎಲ್‌. ನಂದೀಶ್ ಹೃದಯಾಘಾತದಿಂದ ಗುರುವಾರ ಮೃತಪಟ್ಟ ಸಂದರ್ಭದಲ್ಲಿ ಅಂತಿಮ ದರ್ಶನ ಪಡೆಯಲು ಬಂದ ಸಚಿವ ಎಂ.ಟಿ.ಬಿ. ನಾಗರಾಜ್, ಬೆಂಗಳೂರು ಪೊಲೀಸ್ ಕಮಿಷನರ್‌ ಪ್ರತಾಪ್ ರೆಡ್ಡಿ ಅವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದರು. ನಂದೀಶ್ ಅವರನ್ನು ಪಬ್‌ ವಿಚಾರದಲ್ಲಿ ಅಮಾನತುಗೊಳಿಸಿದ್ದಕ್ಕಾಗಿ ಕಿಡಿಕಾರಿದ್ದರು.

‘ತಪ್ಪು ನಡೆದಿದ್ದರೆ ಪೊಲೀಸ್‌ ಕಮಿಷನರ್‌ ನೋಟಿಸ್‌ ನೀಡಬಹುದಿತ್ತು. ಸಣ್ಣ ವಿಷಯಕ್ಕೆ ಅಮಾನತುಗೊಳಿಸಲಾಗಿತ್ತು. ಕಮಿಷನರ್ ಅವರು ದೊಡ್ಡ ಅಪರಾಧ ಮಾಡಿದವರನ್ನೇ ಏನೂ ಮಾಡಿಲ್ಲ. ಲೂಟಿ ಮಾಡುವವರು ಮಾಡುತ್ತಿದ್ದಾರೆ. ಈ ಇನ್‌ಸ್ಪೆಕ್ಟರ್‌ಗೆ ಒಂದು ಅವಕಾಶ ಕೊಡಬೇಕಾಗಿತ್ತು. ಎಚ್ಚರಿಕೆ ನೀಡಬೇಕಾ ಗಿತ್ತು’ ಎಂದು ಸಚಿವ ನಾಗರಾಜ್‌ ಹೇಳಿದ್ದರು.


Spread the love

About Laxminews 24x7

Check Also

ದಾನವೀರ ಶರಣ ಸಿರಸಂಗಿ ಲಿಂಗರಾಜ ದೇಸಾಯಿ ಅವರ 165ನೇ ವರ್ಷದ ಜಯಂತ್ಯೋತ್ಸವ ಆಚರಣೆ

Spread the loveಸವದತ್ತಿ; ದಾನವೀರ ಶರಣ ಸಿರಸಂಗಿ ಲಿಂಗರಾಜ ದೇಸಾಯಿ ಅವರ 165ನೇ ವರ್ಷದ ಜಯಂತ್ಯೋತ್ಸವ ಆಚರಣೆ ಧಾರವಾಡದ ಮುರುಗಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ