ಧಾರವಾಡ ಲೋಕಸಭಾ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಬಣ್ಣ ದರ್ಪಣೆ ಎಂಬ ಶೀರ್ಷಿಕೆ ಅಡಿಯಲ್ಲಿ ಬಣ್ಣ ಹಚ್ಚುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿಂದು ಸುದ್ದಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ನನ್ನ ಪರಿಕಲ್ಪನೆಯಾಗಿದೆ. ಈ ಅಭಿಯಾನಕ್ಕೆ ನಾಳೆ ಸಂಜೆ 6 ಕ್ಕೆ ಕುಂದಗೋಳ ಪಟ್ಟಣದ ಶ್ರೀ ಹರಭಟ್ಟ ಶಾಲಾ ಮೈದಾನದಿಂದ ಅಧಿಕೃತವಾಗಿ ಚಾಲನೆ ನೀಡಲಾಗುವುದು. ಮುಖ್ಯ ಅತಿಥಿಗಳಾಗಿ ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ ಸೇರಿದಂತೆ ಜಿಲ್ಲೆಯ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸುವರು ಎಂದರು.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1177 ಸರ್ಕಾರಿ ಶಾಲಾ- ಕಾಲೇಜುಗಳಿವೆ, ಅದರಲ್ಲಿ ಪ್ರಾಥಮಿಕ 984, ಪ್ರೌಢ 139, ಪದವಿ ಪೂರ್ವ ಮತ್ತು ಪದವಿ 54 ಗಳಿವೆ. ಇವುಗಳಿಗೆ ಸಾರ್ವಜನಿಕರ ಸಹಭಾಗಿತ್ವದಲ್ಲಿ 60 ಕೋಟಿ ವೆಚ್ಚದಲ್ಲಿ ಶಾಲಾ-ಕಾಲೇಜುಗಳಿಗೆ ಬಣ್ಣ ಬಳಿಯುವ ಅಭಿಯಾನ ನಡೆಸಲಾಗುವುದು. ಇದಕ್ಕಾಗಿ ಶಾಲೆಯ ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು, ಸಂಘ ಸಂಸ್ಥೆಗಳ ಶ್ರಮದಾನಕ್ಕೆ ಮುಂದಾಗಬೇಕು ಎಂದರು.
ಶಾಲಾ ಕಾಲೇಜುಗಳಿಗೆ ಬಣ್ಣ ಬಳಿಯಲು ಆಸಕ್ತರು ರಿಜಿಸ್ಟರ್ ಮಾಡಿಕೊಳ್ಳಬೇಕು. ಅದಕ್ಕಾಗಿ ಈಗಾಗಲೇ ಆಫ್ ಲೈನ್ ರಿಜಿಸ್ಟರ್ ಪ್ರಕ್ರಿಯೆ ಆರಂಭವಾಗಿದೆ. ನಾಳೆ ಆನ್ಲೈನ್ ರಿಜಿಸ್ಟರ್ ಪ್ರಕ್ರಿಯೆ ಕೂಡಾ ಆರಂಭವಾಗಲಿದೆ. ಅಭಿಯಾನದಲ್ಲಿ ಭಾಗಿಯಾಗಿ ಸುಂದರ ರೀತಿಯಲ್ಲಿ ಬಣ್ಣ ಹೆಚ್ಚಿದ ತಂಡಕ್ಕೆ ಬಹುಮಾನ ಕೂಡಾ ನೀಡಲಾಗುವುದು ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ಇದು 60 ಕೋಟಿ ಬಣ್ಣ ಹಾಗೂ ಬಣ್ಣ ಬಳಿಯಲು ಬೇಕಾದ ವಸ್ತುಗಳನ್ನು ಕೊಡಲಾಗುತ್ತಿದೆ. ಇದರಲ್ಲಿ ಕಾಂಪೌಂಡ್, ಶೌಚಾಲಯ, ಕಟ್ಟಡಕ್ಕೆ ಬಣ್ಣ ಹಚ್ಚಲಾಗುವುದು. ಮುಂದಿನ 12 ತಿಂಗಳ ಒಳಗಾಗಿ ಕನಿಷ್ಠ 100 ಶಾಲೆ ಮುಗಿಸುವ ಗುರಿ ಹೊಂದಿದ್ದೇವೆ ಎಂದರು.