ಚಿತ್ರದುರ್ಗ: ಪೋಕ್ಸೊ ಹಾಗೂ ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ನ್ಯಾಯಾಲಯಕ್ಕೆ ಗುರುವಾರ 694 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ತನಿಖೆಯನ್ನು ಭಾಗಶಃ ಪೂರ್ಣಗೊಳಿಸಿರುವ ಪೊಲೀಸರು, ದೋಷಾರೋಪ ಪಟ್ಟಿಯ ತಲಾ 347 ಪುಟಗಳ ಎರಡು ಪ್ರತಿಗಳನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದರು. ಒಂದರಲ್ಲಿ ಮುರುಘಾ ಶರಣರು ಹಾಗೂ ಮತ್ತೊಂದರಲ್ಲಿ ಇತರ ಆರೋಪಿಗಳಾದ ಹಾಸ್ಟಲ್‌ನ ಮಹಿಳಾ ವಾರ್ಡನ್ ಮತ್ತು ಪರಮಶಿವಯ್ಯ ವಿರುದ್ಧ ದೋಷಾರೋಪದ ವಿವರಗಳಿವೆ.
‘ಮೂವರ ವಿರುದ್ಧದ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ. 17 ವರ್ಷದ ಬಾಲಕ ಹಾಗೂ ಗಂಗಾಧರಯ್ಯ ಕೃತ್ಯದಲ್ಲಿ ಭಾಗಿಯಾಗಿರುವುದು ಇನ್ನೂ ಖಚಿತವಾಗಿಲ್ಲ. ತನಿಖೆ ಮುಂದುವರಿಯಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದ್ದಾರೆ.
ಐಪಿಸಿ 376 (ಅತ್ಯಾಚಾರ), ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ), ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕಾಯ್ದೆ, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ, ಬಾಲನ್ಯಾಯ ಕಾಯ್ದೆ ಅಡಿ ಆ.28ರಂದು ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.