ಬೆಂಗಳೂರು: ಜನರ ಹೊಟ್ಟೆಗೆ ಸಮರ್ಪಕವಾದ ಅನ್ನ ನೀಡದ ಬಿಜೆಪಿಯವರಿಂದ ದೇಶವನ್ನು ವಿಶ್ವಗುರು ಮಾಡಲು ಸಾಧ್ಯವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಜಗತ್ತಿನ ಜನರ ಮುಂದೆ ಹಸಿವು, ಸ್ವಾತಂತ್ರ್ಯ, ಮಹಿಳೆಯರ ದುಡಿಮೆ ಮುಂತಾದ ವಿಷಯಗಳಲ್ಲಿ ಭಾರತದ ಮರ್ಯಾದೆ ಹರಾಜಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಮೋದಿಯವರನ್ನು ಟೀಕಿಸಿದವರ ವಿರುದ್ಧ ಪ್ರತಿಭಟಿಸಿ ಎಂದು ಹೇಳಿಕೆ ನೀಡಿದ್ದ ಯಡಿಯೂರಪ್ಪನವರಿಗೆ ಮತ್ತು ಬಿಜೆಪಿಯವರಿಗೆ ನಾನು 32 ಪ್ರಶ್ನೆಗಳನ್ನು ಕೇಳಿದ್ದೆ. ಇದುವರೆಗೆ ಬಿಜೆಪಿಯವರಿಗೆ ಮತ್ತು ಯಡಿಯೂರಪ್ಪನವರಿಗೆ ಒಂದೇ ಒಂದು ಪ್ರಶ್ನೆಗೂ ಉತ್ತರಿಸಲು ಸಾಧ್ಯವಾಗಲಿಲ್ಲ ಎಂದು ವ್ಯಂಗ್ಯವಾಡಿದರು.
ಇದರ ಮಧ್ಯೆ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ 121 ದೇಶಗಳ ಪೈಕಿ 107 ನೇ ಸ್ಥಾನಕ್ಕೆ ಕುಸಿದಿದೆಯೆಂಬ ವರದಿ ಬಿಡುಗಡೆಯಾಯಿತು. ಬಿಜೆಪಿಯವರು ಯಥಾಪ್ರಕಾರ ಈ ವರದಿಯೆ ಸರಿ ಇಲ್ಲ ಎಂದು ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರದ ದಾಖಲೆಗಳನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದೆ ಎಂಬ ಸಾಕ್ಷ್ಯಗಳನ್ನು ಸಮೀಕ್ಷೆ ಮಾಡಿದವರು ತೋರಿಸಿದ್ದಾರೆ. ಮುಖ್ಯವಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ-5 ರಲ್ಲಿನ ಅಂಕಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಹಸಿವಿನ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆಯೆಂದು ತಿಳಿಸಿದ ಮೇಲೆ ಬಿಜೆಪಿಯವರು ಆಕ್ಷೇಪಗಳನ್ನು ನಿಲ್ಲಿಸಿದ್ದಾರೆ ಎಂದರು.