ರಾಯಚೂರು: ಭಾರತ್ ಜೋಡೊ ಪಾದಯಾತ್ರೆ ಆರಂಭಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸುಕ್ಷೇತ್ರ ಮಂತ್ರಾಲಯಕ್ಕೆ ಗುರುವಾರ ತಲುಪಿದ್ದು, ಶ್ರೀರಾಘವೇಂದ್ರಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ಮೂಲ ವೃಂದಾವನ ದರ್ಶನ ಪಡೆದು ‘ಪೂಜ್ಯಾಯ ರಾಘವೇಂದ್ರಾಯ..’ ಮಂತ್ರ ಉಚ್ಛರಿಸಿದ್ದು ವಿಶೇಷವಾಗಿತ್ತು.
ಯಮ್ಮಿಗನೂರು ಮಾರ್ಗದಿಂದ ಸುಕ್ಷೇತ್ರಕ್ಕೆ ಸಂಜೆ ತಲುಪಿದ ರಾಹುಲ್‌ಗಾಂಧಿ ಅವರು ಮೊದಲು ಅತಿಥಿಗೃಹಕ್ಕೆ ಹೋಗಿ ಮಠದ ಸಂಪ್ರದಾಯದಂತೆ ಬಿಳಿಪಂಚೆ ಹಾಗೂ ಶಲ್ಯ ಧರಿಸಿ ಮಠದ ಕಡೆಗೆ ಬಂದರು. ಮಠದ ಆಡಳಿತಾಧಿಕಾರಿಗಳು ಹೂಮಾಲೆ ಹಾಕಿದರು, ವೇದಪಾಠ ಶಾಲೆಯ ಅಧ್ಯಾಪಕರು ಮಂತ್ರೋಚ್ಛಾರ ಮಾಡುವ ಮೂಲಕ ಭವ್ಯವಾಗಿ ಸ್ವಾಗತಿಸಿದರು.
ಮಂಚಾಲಮ್ಮ ಸನ್ನಿಧಿಗೆ ಹೋಗಿ ಆಶೀರ್ವಾದ ಪಡೆದ ರಾಹುಲ್‌ಗಾಂಧಿ ಅವರ ಹಣೆಗೆ ಕುಂಕುಮ ತಿಲಕ ಇಡಲಾಯಿತು. ಅಲ್ಲಿಂದ ರಾಯರ ಮಠದೊಳಗೆ ಬರುತ್ತಿದ್ದಂತೆ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಮೂಲ ವೃಂದಾವನಕ್ಕೆ ಕರೆತಂದು ರಾಯರ ದರ್ಶನ ಮಾಡಿಸಿದರು.