ಬೆಂಗಳೂರು: ನಗರದಾದ್ಯಂತ ಬುಧವಾರ ರಾತ್ರಿ ಧಾರಾಕಾರ ಮಳೆ ಸುರಿದು, ರಸ್ತೆ, ಬಡಾವಣೆಗಳಿಗೆ ನೀರು ನುಗ್ಗಿದೆ. ಸೆಪ್ಟೆಂಬರ್‌ನಲ್ಲಿ ಅತಿ ಹೆಚ್ಚು ಸಮಸ್ಯೆಗೆ ಒಳಗಾಗಿದ್ದ ನಗರದ ಪೂರ್ವ ವಲಯದಲ್ಲಿ ಮತ್ತೆ ಸಂಕಷ್ಟ ಎದುರಾಗಿದ್ದು, ರಾಜಕಾಲುವೆ ಒತ್ತುವರಿ ತೆರವು ಕಾಟಾಚಾರಕ್ಕೆ ನಡೆದಿರುವುದು ಬಹಿರಂಗವಾಗಿದೆ.
ನಗರದ ಹಲವು ಬಡಾವಣೆಗಳಲ್ಲಿ ನೂರಾರು ಮನೆಗಳಿಗೆ ಮಳೆ ನೀರು ನುಗ್ಗಿ ನೂರಾರು ಜನರು ಮಳೆ ನೀರನ್ನು ಮನೆಯಿಂದ ಹೊರಹಾಕಲು ರಾತ್ರಿಯಿಡೀ ಪ್ರಯಾಸಪಟ್ಟರು. ಪಶ್ಚಿಮ ಹಾಗೂ ದಕ್ಷಿಣ ವಲಯದಲ್ಲಿ ಭಾರಿ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದ್ದವು. ಬುಧವಾರ ಮಧ್ಯರಾತ್ರಿವರೆಗೂ ರಸ್ತೆಗುಂಡಿಗಳ ಜೊತೆಗೆ ಮಳೆ ನೀರೂ ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು. ಗುರುವಾರ ಮಧ್ಯಾಹ್ನದವರೆಗೆ ಶಿವಾನಂದ ವೃತ್ತ, ಆನಂದರಾವ್ ವೃತ್ತ ಸೇರಿದಂತೆ ಹಲವು ರಸ್ತೆಗಳಲ್ಲಿ, ಮೇಲ್ಸೇತುವೆಗಳ ಕೆಳಭಾಗದಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿತ್ತು.