ಇದೇ ಮೊದಲ ಬಾರಿ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಆಚರಿಸಲಾಗುತ್ತಿರುವುದರಿಂದ ಪ್ರತಿ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲು ಅನುಕೂಲವಾಗುವಂತೆ ಒಟ್ಟು 15 ಉಪ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿಯ ಅಧ್ಯಕ್ಷರು ಮಾತ್ರವಲ್ಲದೆ ಎಲ್ಲ ತಾಲ್ಲೂಕುಗಳ ತಹಶೀಲ್ದಾರರನ್ನು ಕೂಡ ಉತ್ಸವದ ಕೆಲಸಕ್ಕೆ ನಿಯೋಜಿಸಲಾಗಿದೆ.
ಎಲ್ಲ ಉಪ ಸಮಿತಿಯ ಅಧ್ಯಕ್ಷರು ಮುಂದಿನ ಐದು ದಿನಗಳ ಕಾಲ ಕಿತ್ತೂರಿನಲ್ಲಿಯೇ ಉಪಸ್ಥಿತರಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.ಕಿತ್ತೂರು ಉತ್ಸವದ ಹಿನ್ನೆಲೆಯಲ್ಲಿ ಚನ್ನಮ್ಮನ ಕಿತ್ತೂರಿನಲ್ಲಿ ಗುರುವಾರ ಉತ್ಸವದ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದ ನಂತರ ಪಟ್ಟಣ ಪಂಚಾಯತ ಸಭಾಂಗಣದಲ್ಲಿ ನಡೆದ ವಿವಿಧ ಉಪ ಸಮಿತಿಗಳ ಅಧ್ಯಕ್ಷರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಈ ಬಾರಿ ಮೂರು ವೇದಿಕೆಗಳಿರುವುದರಿಂದ ಮುಖ್ಯ ವೇದಿಕೆ, ಸಾಂಸ್ಕೃತಿಕ, ಕ್ರೀಡೆ, ವಸ್ತುಪ್ರದರ್ಶನ ಸೇರಿದಂತೆ ಎಲ್ಲ ಸಮಿತಿಯವರು ತಮಗೆ ವಹಿಸಲಾದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು. ಉಪ ಸಮಿತಿಗಳು ತಮ್ಮ ಕೆಲಸಕಾರ್ಯ ನಿರ್ವಹಣೆಗೆ ಅಗತ್ಯ ಅಧಿಕಾರಿಗಳು/ಸಿಬ್ಬಂದಿ ನಿಯೋಜಿಸಲಾಗುವುದು ಎಂದರು.