ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ‘ಪೇಸಿಎಂ’ ಅಭಿಯಾನ ಆರಂಭಿಸಿದ್ದ ಕಾಂಗ್ರೆಸ್, ಪ್ರಶ್ನೆಗಳನ್ನು ಮುಂದಿಟ್ಟು ‘ಸೇಸಿಎಂ’ ಅಭಿಯಾನ ಶುರು ಮಾಡಿದೆ. ಅಲ್ಲದೆ, ಈ ಪ್ರಶ್ನೆಗಳಿಗೆ ಉತ್ತರಿಸಲು ಕೂಡಾ ‘ಪೇಸಿಎಂ’ ಬೇಕೆ ಎಂದೂ ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿ ನಿಮ್ಮ ಹತ್ತಿರ ಇದೆಯಾ ಉತ್ತರ?’ ಎಂಬ ಅಭಿಯಾನದ ಮೂಲಕ ರಾಜ್ಯ ಬಿಜೆಪಿ ಸರ್ಕಾರಕ್ಕೆ 50 ಪ್ರಶ್ನೆಗಳನ್ನು ಕೇಳಲಾಗಿದೆ. ಆದರೆ, ಈವರೆಗೂ ಒಂದು ಪ್ರಶ್ನೆಗೂ ಉತ್ತರಿಸಿಲ್ಲ’ ಎಂದು ಹೇಳಿದೆ.
‘ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 550 ಭರವಸೆಗಳನ್ನು ನೀಡಿತ್ತು. ಈ ಭರವಸೆಗಳ ಬಗ್ಗೆ ಇದುವರೆಗೂ ನಾವು 50 ಪ್ರಶ್ನೆಗಳನ್ನು ಕೇಳಿದ್ದೇವೆ. 50 ಪ್ರಶ್ನೆಗಳಿಗೆ ಉತ್ತರಿಸಲಾಗದ ನಿಮಗೆ, 550 ಪ್ರಶ್ನೆಗಳಿಗೆ ಉತ್ತರಿಸುವ ತಾಕತ್ತಿದೆಯಾ’ ಎಂದು ಪ್ರಶ್ನಿಸಿರುವ ಕಾಂಗ್ರೆಸ್, ‘ಜನರ ಪರವಾಗಿ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸದಿದ್ದರೆ ಪೇಸಿಎಂ ಜೊತೆಗೆ ಸೇಸಿಎಂ ಅಭಿಯಾನ ಮಾಡಬೇಕಾಗುತ್ತದೆ’ ಎಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ‘ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಶೇ 10ರಷ್ಟನ್ನೂ ಬಿಜೆಪಿ ಈಡೇರಿಸಿಲ್ಲ. ಹೀಗಾಗಿ, ನಾವು ಪೇಸಿಎಂ ಅಭಿಯಾನದ ಜತೆಗೆ ‘ಸೇಸಿಎಂ’ ಆಂದೋಲನದ ಮೂಲಕ 50 ಪ್ರಶ್ನೆ ಕೇಳಿದ್ದೇವೆ. ಸರ್ಕಾರ ಮೂಕ ಬಸವನ ರೀತಿ ಕುಳಿತರೆ ಆಗುವುದಿಲ್ಲ. ಪ್ರಣಾಳಿಕೆ ತೋರಿಸಿ ಜನರಿಂದ ಮತ ಹಾಕಿಸಿಕೊಂಡಿರುವ ಬಿಜೆಪಿ ಉತ್ತರಿಸಬೇಕು’ ಎಂದು ಆಗ್ರಹಿಸಿದರು.