ಬಳ್ಳಾರಿ: ಎಐಸಿಸಿ ಮುಖಂಡ ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ಪಾದಯಾತ್ರೆ’ಯಲ್ಲಿ ವಿದ್ಯುತ್ ಅವಘಡ ಸಂಭವಿಸಿ, ಐವರಿಗೆ ಗಾಯಗಳಾಗಿರುವ ಘಟನೆ ಭಾನುವಾರ ನಡೆದಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಗರದ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಶನಿವಾರ ಸಾರ್ವಜನಿಕ ಬಹಿರಂಗ ಸಭೆಯನ್ನು ಮುಗಿಸಿಕೊಂಡು ತಾಲೂಕಿನ ಸಂಗನಕಲ್ಲು ಗ್ರಾಮದ ಹೊರ ವಲಯದಲ್ಲಿ ತಂಗಿದ್ದ ರಾಹುಲ್ ಗಾಂಧಿಯವರು, ಭಾನುವಾರ ಬೆಳಗ್ಗೆ 6.30ಕ್ಕೆ ಎಂದಿನಂತೆ ಪಾದಯಾತ್ರೆಗೆ ಕೈಗೊಂಡ ಮೋಕಾದತ್ತ ತೆರಳಿದರು.
ಈ ವೇಳೆ ಹೊಸಮೋಕ ದಾಟುತ್ತಿದ್ದಂತೆ ಇದ್ದ ದೊಡ್ಡ ಮೋರಿಯ ಬಳಿ ಸ್ಥಳೀಯ ಗ್ರಾಪಂ ಅಧ್ಯಕ್ಷ ರಾಮಣ್ಣ ಎನ್ನುವವರು, ಕಬ್ಬಿಣದ ರಾಡ್ (ಸರಳು)ಗೆ ಸೇರಿಸಿದ್ದ ಬಾವುಟವನ್ನು ಹಿಡಿದು ಮೇಲೆಕ್ಕೆತ್ತಿ ಹಾರಾಟ ಮಾಡುತ್ತಿದ್ದರು. ಈ ವೇಳೆ ಬಾವುಟದ ಕಬ್ಬಿಣದ ರಾಡ್, ಕೆಳಗೆ ಜೋತುಬಿದ್ದಿದ್ದ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದ್ದು, ರಾಮಣ್ಣ, ಸಂತೋಷ್ ಸೇರಿದಂತೆ ಐವರಿಗೆ ಗಾಯಗಳಾಗಿವೆ.
ಗಾಯಗೊಂಡ ಎಲ್ಲರನ್ನೂ ಹೊಸಮೋಕಾದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಸುಟ್ಟಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
Laxmi News 24×7