ಬೆಂಗಳೂರು: ವಿರಾಟ್ ಕೊಹ್ಲಿ ಬೌಂಡರಿ ಹೊಡೆಯವ ಮೂಲಕ ಮುಂಬೈ ವಿರುದ್ಧದ ಸೂಪರ್ ಓವರ್ ಪಂದ್ಯದಲ್ಲಿ ಆರ್‌ಸಿಬಿ ಜಯಗಳಿಸಿದೆ. ಒಂದು ವೇಳೆ ಈ ಪಂದ್ಯವೂ ಟೈ ಆಗಿದ್ದರೆ ಏನಾಗುತ್ತಿತ್ತು ಎಂಬ ಪ್ರಶ್ನೆಯನ್ನು ಸೋಮವಾರ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕೇಳುತ್ತಿದ್ದರು.
2007ರ ಭಾರತ ಪಾಕಿಸ್ತಾನ ನಡುವಿನ ಟಿ 20 ವಿಶ್ವಕಪ್ ಲೀಗ್ ಪಂದ್ಯದಲ್ಲಿ ಭಾರತ ಬಾಲ್ ಔಟ್ ಮೂಲಕ ಪಾಕಿಸ್ತಾನವನ್ನು ಸೋಲಿಸಿತ್ತು. ಭಾರತದ ಬೌಲರ್‌ಗಳು ಮೂರು ಬಾರಿ ವಿಕೆಟಿಗೆ ಬಾಲ್ ಹಾಕಿದರೆ ಆರಂಭದ ಮೂರು ಅವಕಾಶಗಳಲ್ಲಿ ಪಾಕಿಸ್ತಾನ ವಿಫಲವಾದ ಕಾರಣ ಭಾರತ ತಂಡ ಗೆದ್ದಿತ್ತು.
ಈ ನಿಯಮಕ್ಕೆ ವ್ಯಾಪಕ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಒಂದು ಓವರ್ ಆಟ ಆಡಿಸಲು ಐಸಿಸಿ ನಿರ್ಧರಿಸಿತ್ತು. ಯಾವ ತಂಡ ಹೆಚ್ಚು ರನ್‍ಗಳಿಸುತ್ತದೋ ಆ ತಂಡ ವಿಜಯಿ ಎಂದು ಘೋಷಿಸಲಾಗುತ್ತಿತ್ತು. ಆದರೆ 2019ರ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯ ಸೂಪರ್ ಓವರ್‌ನಲ್ಲೂ ಟೈ ಆಗಿತ್ತು. ಆದರೆ ಅತಿ ಹೆಚ್ಚು ಬೌಂಡರಿ ಹೊಡೆದಿದ್ದ ಕಾರಣ ಇಂಗ್ಲೆಂಡ್ ವಿಶ್ವಕಪ್ ಜಯಿಸಿತ್ತು.
ವಿಶ್ವಕಪ್‍ನಂತಹ ಮಹತ್ವದ ಪಂದ್ಯದಲ್ಲಿ ಬೌಂಡರಿ ಆಧಾರದ ಮೇಲೆ ಪಂದ್ಯ ನಿರ್ಧರಿಸುವುದಕ್ಕೆ ಘಟಾನುಘಟಿ ಆಟಗಾರರೇ ಭಾರೀ ವಿರೋಧ ವ್ಯಕ್ತಪಡಿಸಿದರು. ಟೀಕೆ ವ್ಯಕ್ತವಾದ ಬಳಿಕ ಐಸಿಸಿ 2020ರ ಫೆಬ್ರವರಿಯಲ್ಲಿ ಸೂಪರ್ ಓವರ್ ನಿಯಮಗಳನ್ನು ಬದಲಾವಣೆ ಮಾಡಿತು.
ಏನು ಬದಲಾವಣೆ?
ಸೂಪರ್ ಓವರ್ ಪಂದ್ಯವೂ ಟೈ ಆದರೆ ಮತ್ತೊಂದು ಸೂಪರ್ ಓವರ್ ಆಡಿಸಲಾಗುತ್ತದೆ. ಇಲ್ಲಿಯೂ ಟೈ ಆದರೆ ಎರಡನೇ ಬಾರಿ ಸೂಪರ್ ಓವರ್ ಆಡಿಸಲಾಗುತ್ತದೆ. ಒಟ್ಟಿನಲ್ಲಿ ಸೂಪರ್ ಓವರ್ ಮೂಲಕವೇ ಅಂತಿಮ ಫಲಿತಾಂಶವನ್ನು ನಿರ್ಧಾರ ಮಾಡಲಾಗುತ್ತದೆ.
ಒಂದು ವೇಳೆ ಎಸೆತಗಳು ಬಾಕಿ ಇದ್ದರೂ ಎದುರಾಳಿ ತಂಡದ ಎರಡು ವಿಕೆಟ್ ಪತನವಾದರೆ ಆಲೌಟ್ ಎಂದು ಘೋಷಿಸಲಾಗುತ್ತದೆ. ಪ್ರತಿ ತಂಡಕ್ಕೆ ಒಂದು ಬಾರಿ ಅಂಪೈರ್ ತೀರ್ಮಾನವನ್ನು ಪುನರ್ ಪರಿಶೀಲಿಸಲು ಅವಕಾಶ ನೀಡಲಾಗುತ್ತದೆ.