ಬಳ್ಳಾರಿ: ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿಯನ್ನು ಹಿಂದೆಂದೂ ನೋಡಿಲ್ಲ. ಮೋದಿ ಪ್ರಧಾನಿಯಾದ ನಂತರ ಧರ್ಮ ಆಧಾರಿತ ಜಾತಿ ರಾಜಕಾರಣ ನಡೆಯುತ್ತಿದೆ. ಇದನ್ನು ಪ್ರಶ್ನಿಸಿದರೆ ಕ್ರಿಮಿನಲ್ ಮೊಕದ್ದಮೆ ಹಾಕಲಾಗುತ್ತಿದೆ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮಾಡಿದರು.
ಬಳ್ಳಾರಿಯ ಗುರು ಫಂಕ್ಷನ್ ಹಾಲ್ನಲ್ಲಿ ಭಾರತ್ ಜೋಡೋ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿಯನ್ನು ವಿರೋಧಿಸಿದರೆ, ಪ್ರಶ್ನಿಸಿದರೆ ಕ್ರಿಮಿನಲ್ ಮೊಕದ್ದಮೆ ಹಾಕುತ್ತಾರೆ. ಸಿಬಿಐ, ಇಡಿ, ಅದಾಯ ತೆರಿಗೆ ಇಲಾಖೆಯ ಮೂಲಕ ಹೆದರಿಸಲಾಗುತ್ತಿದೆ ಎಂದರು.
ಭಾರತ್ ಜೋಡೋ ಯಾತ್ರೆ ರಾಜಕೀಯ ಲಾಭಕ್ಕಾಗಿ ನಡೆಯುತ್ತಿಲ್ಲ, ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಾದಯಾತ್ರೆ ಮಾಡುತ್ತಿಲ್ಲ. ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ಭಯದ ವಾತಾವರಣದಲ್ಲಿ ಬದುಕುವ ಜನರಲ್ಲಿ ಆತ್ಮವಿಶ್ವಾಸ ತುಂಬಬೇಕಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಜೋಡೋ ಯಾತ್ರೆ ನಡೆಯುತ್ತಿದೆ ಎಂದರು.ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ನಡೆಯುತ್ತಿದೆ ಎಂದು ಹೇಳಿದರೆ, ಅದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ದಾಖಲೆ ಕೇಳುತ್ತಾರೆ. ಆದರೆ ಕಳೆದ ಬಾರಿ ಚುನಾವಣೆ ಪ್ರಚಾರದಲ್ಲಿ ಮೋದಿಯವರು ರಾಜ್ಯ ಸರ್ಕಾರ ಶೇ 10ರಷ್ಟು ಕಮಿಷನ್ ಎಂದು ಆರೋಪ ಮಾಡಿದ್ದರು. ಆಗ ಮೋದಿ ಬಳಿ ಏನಾದರೂ ದಾಖಲಾತಿ ಇತ್ತೆ ಎಂದು ಪ್ರಶ್ನಿಸಿದರು.